ಜನ ಸ್ಮರಿಸುವಂತಹ ಕೆಲಸವೇ ಜನಸೇವೆ

| Published : Jul 08 2024, 12:31 AM IST

ಸಾರಾಂಶ

ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗುತ್ತಾನೇ ಹೊರತು ಪ್ರವೃತ್ತಿಯಿಂದ ಅಲ್ಲ

ಶಿರಹಟ್ಟಿ: ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ. ಆದರೆ, ಸೇವಾವಧಿಯಲ್ಲಿ ಮಾಡಿದ ಸೇವೆ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ನೌಕರರು ತಮ್ಮ ಸೇವಾವಧಿಯಲ್ಲಿ ಜನ ಸದಾ ಸ್ಮರಿಸುವಂತಹ ಕೆಲಸ ಮಾಡಬೇಕು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಜಿಲ್ಲಾ ಕದಳಿ ವೇದಿಕೆ, ಮಾಧ್ಯಮಿಕ ಶಾಲಾ ನೌಕರ ಸಂಘ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತ ವತಿಯಿಂದ ಶನಿವಾರ ಸಂಜೆ ಶಿರಹಟ್ಟಿ ಪಟ್ಟಣ ಎಫ್.ಎಂ. ಡಬಾಲಿ ಹೈಸ್ಕೂಲ್‌ನಲ್ಲಿ (ಶಿಕ್ಷಣ ಸಂಸ್ಥೆಯಲ್ಲಿ) ಶಿಕ್ಷಕರಾಗಿ ಅತ್ಯಂತ ಶಿಸ್ತು ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಎಸ್.ಎಸ್. ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿದರು.

ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗುತ್ತಾನೇ ಹೊರತು ಪ್ರವೃತ್ತಿಯಿಂದ ಅಲ್ಲ. ಹಾಗಾಗಿ ಪ್ರತಿಯೊಬ್ಬ ನಿವೃತ್ತ ಶಿಕ್ಷಕರು ಕೂಡ ತಮ್ಮಲ್ಲಿರುವಂತಹ ಜ್ಞಾನ, ಬೋಧನಾ ಕೌಶಲ್ಯ ಸದುಪಯೋಗಮಾಡಿಕೊಂಡು ಸಮಾಜದಲ್ಲಿರುವ ಯಾವುದಾದರೂ ಶಾಲೆಗಳಲ್ಲಿ ತಮ್ಮ ಸೇವೆ ಮೀಸಲಾಗಿಟ್ಟರೆ ಅದೊಂದು ಉತ್ತಮ ಕಾರ್ಯ ಸೇವೆ ಎನಿಸಿಕೊಳ್ಳುವುದು. ಶಿಕ್ಷಕನಿಗೆ ಸಾಮಾಜಿಕ ದೃಷ್ಟಿಯೊಳಗೆ ಯಾವತ್ತೂ ನಿವೃತ್ತಿ ಇಲ್ಲ. ಬೇರೆ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರಿಗೆ ಅವರ ಹುದ್ದೆಯನ್ನೇ ಗುರುತಿಸಿ ಕರೆಯಲಾಗುವುದಿಲ್ಲ. ಆದರೆ ಶಿಕ್ಷಕ ಕೊನೆ ಕ್ಷಣದವರೆಗೂ ಶಿಕ್ಷಕನಾಗಿರುತ್ತಾನೆ ಎಂದರು.

ಎಫ್.ಎಂ. ಡಬಾಲಿ ಜೂನಿಯರ್ ಕಾಲೇಜು ಉಪನ್ಯಾಸಕಿ ಹಾಗೂ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಪ್ರೋ. ಸುಧಾ ಹುಚ್ಚಣ್ಣವರ ಮಾತನಾಡಿ, ಸಕಲ ಸಿಬ್ಬಂದಿ ಹಾಗೂ ಶಿಷ್ಯ ಬಳಗದ ಮನ ಗೆದ್ದು ಶಿಕ್ಷಣ ಕ್ಷೇತ್ರದಲ್ಲಿ ಜನ ಮೆಚ್ಚುವಂತೆ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಎಸ್.ಎಸ್.ಪಾಟೀಲ ಕಾರ್ಯ ಮೆಚ್ಚುವಂತಹದ್ದು ಎಂದರು.

ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಎಲ್ಲರೊಂದಿಗೂ ಸ್ನೇಹ ಜೀವಿಯಾಗಿ ಇಲಾಖೆ ವಹಿಸಿದ ಕೆಲಸವನ್ನು ಚಾಚು ತಪ್ಪದೇ ಜವಾಬ್ದಾರಿ ಅರಿತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಸದಾ ಜನರ ನಾಲಗೆಯಲ್ಲಿ ಉಳಿಯುತ್ತಾರೆ. ಅಂಥವರಲ್ಲಿ ಎಸ್.ಎಸ್. ಪಾಟೀಲ ಗುರುಗಳು ಕೂಡ ಒಬ್ಬರೂ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ಎಸ್.ಎಸ್. ಪಾಟೀಲ ಮಾತನಾಡಿ, ಭಾವೈಕ್ಯತೆಗೆ ಹೆಸರುವಾಸಿಯಾಗಿರುವ ಶಿರಹಟ್ಟಿ ಪಟ್ಟಣದ ಜನತೆ ಪರೋಪಕಾರಿ ಹಾಗೂ ಕರುಣಾಮಯಿಯಾಗಿದ್ದಾರೆ. ಡಬಾಲಿ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿದ್ದು, ನನ್ನ ಭಾಗ್ಯ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರ ಸಹಕಾರ, ಪ್ರೋತ್ಸಾಹ ಎಂದೂ ಮರೆಯುವುದಿಲ್ಲ ಎಂದು ಹೇಳಿದರು.

ಎಚ್.ಎಂ. ದೇವಗೀರಿ, ಎಚ್.ಎಂ. ಪಲ್ಲೇದ, ಫಕ್ಕೀರೇಶ ರಟ್ಟಿಹಳ್ಳಿ, ಎಸ್.ಎಚ್. ಪಾಟೀಲ, ಗಂಗಾಧರ ಡೊಂಬರ, ಭರಮಪ್ಪ ಸ್ವಾಮಿ, ನೌಶಾದ ಶಿಗ್ಲಿ, ಎಂ.ಎ. ಬುಕ್ಕಿಟಗಾರ, ಮೋಹನ್ ಮಾಂಡ್ರೆ, ಎನ್.ವೈ. ಕರಿಗಾರ, ಆರ್.ಎನ್. ಬಟಗುರ್ಕಿ, ಗಣೇಶ ಅರ್ಕಸಾಲಿ, ರಾಮಣ್ಣ ಕಂಬಳಿ, ಅಕಬರ ಯಾದಗಿರಿ, ಎನ್. ಹನಮರಡ್ಡಿ, ಸುಭಾಸ ಭಜಂತ್ರಿ, ವಿಶ್ವನಾಥ ಸ್ವಾಮಿ ಸೇರಿದಂತೆ ಅನೇಕರು ಇದ್ದರು.