ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನನ್ನ ಜನ್ಮ ಮತ್ತು ಕರ್ಮ ಭೂಮಿ ತಿಪಟೂರು ತಾಲೂಕಾಗಿದ್ದು ಜನಸೇವೆಗೆಂದು ಬಂದಿರುವ ನಾನು ಎರಡೂ ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನಸೇವೆಯಿಂದ ಎಂದಿಗೂ ಹಿಂದೆ ಸರಿಯುವ ಮಾತಿಲ್ಲ ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.ನಗರದ ಹಾಸನ ರಸ್ತೆಯಲ್ಲಿರುವ ಕುವೆಂಪು ಭವನದಲ್ಲಿ ಕೆ.ಟಿ. ಶಾಂತಕುಮಾರ್ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದಲೂ ತಾಲೂಕಿನ ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ನಾನು ಅಧಿಕಾರದಲ್ಲಿಲ್ಲದಿದ್ದರೂ ಬರಗಾಲವಿದ್ದಾಗ ಜನರಿಗೆ ಉಚಿತ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ನೀಡಿದ್ದೆ. ಈಗಲೂ ಯಾವುದೇ ಹಳ್ಳಿಯಿಂದ ಸಹಾಯ ಕೇಳಿಕೊಂಡು ನನ್ನ ಬಳಿ ಬಂದವರನ್ನು ಬರಿಗೈಯಲ್ಲಿ ಹಿಂತಿರುಗಿಲ್ಲ. ತಿಪಟೂರು ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ಮಾಡಬೇಕೆನ್ನುವುದು ನನ್ನ ಕನಸು. ಅದನ್ನು ನನಸು ಮಾಡಲು ಯಾವಾಗಲೂ ನಾನು ಹೋರಾಟ ಮಾಡುತ್ತೇನೆ ಎಂದರು. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇದೆ. ಮೈತ್ರಿಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ತಿಪಟೂರು ಸೇರಿದಂತೆ ಅನೇಕ ಕಡೆ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೂ ಇದೇ ಮೈತ್ರಿ ಮುಂದುವರೆಯಲಿದ್ದು ಎನ್‌ಡಿಎ ರಾಜ್ಯದಲ್ಲಿ ೧೫೦ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಎಸ್. ಗುರುಮೂರ್ತಿ ಹಾಗೂ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶಿವಸ್ವಾಮಿ ಮಾತನಾಡಿ ಅಭಿಮಾನಿಗಳು, ಕಾರ್ಯಕರ್ತರು ಮನಸ್ಸು ಬಿಚ್ಚಿ ಮಾತನಾಡಲು ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದು, ಕಳೆದ ಚುನಾವಣೆಗಳಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ. ಹಣ ಎಲ್ಲರಲ್ಲಿಯೂ ಇರುತ್ತದೆ. ಆದರೆ ಜನಸೇವೆ ಮಾಡುವ ಮನಸ್ಸು ಇರುವುದಿಲ್ಲ. ಶಾಂತಕುಮಾರ್ ಹಲವಾರು ವರ್ಷಗಳಿಂದಲೂ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಜನರ ನಾಡಿಮಿಡಿತ ಅರಿತು ಎಲ್ಲ ಕಾರ್ಯಕರ್ತರೂ ಒಗ್ಗಟ್ಟಾಗಿ ದುಡಿದು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ತ್ರಿಯಂಬಕ ಮಾತನಾಡಿ ಕಳೆದ ೩೫ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ರಾಜಕಾರಣದಲ್ಲಿದ್ದೇನೆ. ಆದರೆ ಇದೇ ಪ್ರಥಮ ಬಾರಿಗೆ ನಾನು ಬೇರೆ ಪಕ್ಷದ ವೇದಿಕೆ ಹತ್ತಿದ್ದೇನೆ. ಇದಕ್ಕೆ ಕಾರಣ ಕೆ.ಟಿ.ಶಾಂತಕುಮಾರ ಮೇಲೆ ಇರುವ ವಿಶ್ವಾಸ. ಇತ್ತೀಚೆಗೆ ನಡೆದ ಕೆಎಂಎಫ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದು ಅದರ ಫಲಿತಾಂಶ ಏನಾದರೂ ಆಗಲಿ, ಆದರೆ ನನಗೆ ಸಂಪೂರ್ಣವಾಗಿ ಬೆಂಬಲಿಸಿದ ಶಾಂತಕುಮಾರ್‌ಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದರು. ಸಮಾರಂಭದಲ್ಲಿ, ಗುರುಗದಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಟರಾಜು, ಮುಖಂಡರಾದ ಹಿಂಡಿಸ್ಕೆರೆ ಶಿವಶಂಕರ್, ಮಲ್ಲಪ್ಪಾಚಾರ್, ಚಂದ್ರೇಗೌಡ, ತಿಮ್ಮೇಗೌಡ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.