ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದಲೂ ಸರ್ಕಾರಿ ಸ್ಮಶಾನವಿಲ್ಲದೆ ಸ್ಥಳೀಯ ಸಾರ್ವಜನಿಕರಿಗೆ ತೊಡಕುಂಟಾಗಿದೆ. ಈ ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ಥಳೀಯ ನಿವಾಸಿಗಳು ತಾಲೂಕು ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸುವ ಉದ್ದೇಶದಿಂದ ನಡೆಯುತ್ತಿರುವ ಪ್ರಜಾಸೇವಾ ಆಂದೋಲನದಲ್ಲಿ ಬರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಹಸೀಲ್ದಾರ್ ಡಾ.ಶಿವಕುಮಾರ ಬೀರಾದಾರ ಸೂಚಿಸಿದರು.

ತಾಲೂಕಿನ ನಿಡಘಟ್ಟ ಗ್ರಾಮದ ಸಂತೆ ಮೈದಾನದಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು, ವಿದ್ಯಾರ್ಥಿಗಳು, ವಯೋವೃದ್ಧರು, ತಾಲೂಕು ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸುವ ಉದ್ದೇಶದಿಂದಲೇ ಸರ್ಕಾರ ಪ್ರತಿ ಹೋಬಳಿ ವ್ಯಾಪ್ತಿ ಹಾಗೂ ಗ್ರಾಪಂ ಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಈಗಾಗಲೇ ಬಂದಿರುವ ಹಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲು ಕ್ರಮವಹಿಸಲಾಗಿದೆ. ಉಳಿದ ಅರ್ಜಿಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಕ್ರಮ ವಹಿಸುವ ಜೊತೆಗೆ ಸರ್ಕಾರದ ಯೋಜನೆಗಳು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯಲು ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು.

ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದಲೂ ಸರ್ಕಾರಿ ಸ್ಮಶಾನವಿಲ್ಲದೆ ಸ್ಥಳೀಯ ಸಾರ್ವಜನಿಕರಿಗೆ ತೊಡಕುಂಟಾಗಿದೆ. ಈ ಸಂಬಂಧ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಬಾರಿ ಅತಗೂರು ಹೋಬಳಿ ವ್ಯಾಪ್ತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸ್ಮಶಾನ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ ಧೋರಣೆ ಅನುಸರಿಸುವ ಜತೆಗೆ ಸಲ್ಲಿಸಿರುವ ಅರ್ಜಿಯೇ ನಾಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಗ್ರಾಮದಲ್ಲಿ ಆಭಯ ಆಂಜನೇಯಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಮತ್ತು ಗ್ರಾಮದಲ್ಲಿ ಸಮರ್ಪಕ ಕಸ ವಿಲೆವಾರಿಯಾಗದೆ ಎಲ್ಲೆಂದರಲ್ಲಿ ಅಶುಚಿತ್ವ ಮತ್ತು ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ದಿನನಿತ್ಯ ಒಂದಿಲ್ಲ‌ಒಂದು ಅವಘಡಗಳು ಜರುಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದೆ ಮೌನಕ್ಕೆ ಶರಣಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ತಾಲೂಕು ಆಡಳಿತ ಸರ್ಕಾರಿ ನಿವೇಶನವನ್ನು ಗುರುತಿಸಿ ಪ್ರತ್ಯೇಕ ಕಸವಿಲೇವಾರಿಗೆ ಕ್ರಮ ವಹಿಸುವಂತೆ ಮತ್ತು ಕೆರೆ ಬಯಲು ಪ್ರದೇಶಗಳಲ್ಲಿ ಮೃತರ ಅಂತ್ಯಸಂಸ್ಕಾರ ಜರುಗುತ್ತಿವೆ. ಕೂಡಲೇ ಸ್ಮಶಾನಕ್ಕೆ ಮೂಲ ಸೌಲಭ್ಯ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಶಿವಕುಮಾರ ಬಿರಾದಾರ ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಅಗತ್ಯ ಕ್ರಮವಹಿಸುವ ಜತೆಗೆ ಸ್ಮಶಾನಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಸ್ಥಳೀಯ ಪಿಡಿಓಗೆ ಸೂಚನೆ ನೀಡುವುದಾಗಿ ಹೇಳಿದರು.

ಈ ವೇಳೆ ತಾಪಂ ಇಒ ರಾಮಲಿಂಗಯ್ಯ, ಅಧಿಕಾರಿಗಳಾದ ಗವಿಯಪ್ಪ, ಶಿವಕುಮಾರ್, ರಾಜೇಶ್ವರಿ, ಲಿಖಿತಾ, ರವಿಶಂಕರ್, ಮುಖಂಡರಾದ ಚಿಕ್ಕಣ್ಣ, ಅಭಿ, ರಾಜಣ್ಣ, ಚಿಕ್ಕಪುಟ್ಟೇಗೌಡ, ಆನಂದ್, ಇತರರಿದ್ದರು.