ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಮಳೆಯಿಂದ ನಗರದ ಹಲವು ರಸ್ತೆಗಳಲ್ಲಿ ನೀರು ಹರಿದು ಅಂಗಡಿ ಮಳಿಗೆಗಳಿಗೆ ನುಗ್ಗಿದ್ದರಿಂದ ಪೌರಾಯುಕ್ತ ರುದ್ರೇಶ್ ಅವರು ನಗರದಲ್ಲಿ ಹಲವು ವರ್ಷಗಳಿಂದ ಹೂಳು ತುಂಬಿದ್ದ ಚರಂಡಿಗಳನ್ನು ಸಿಬ್ಬಂದಿ ಮೂಲಕ ಜೆಸಿಬಿ ಯಂತ್ರದಿಂದ ತೆರವುಗೊಳಿಸುವ ಕಾರ್ಯ ಮಾಡಿದರು.ನಗರದಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಆರ್.ಟಿ. ರಸ್ತೆ, ಹಳೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಚರಂಡಿಗಳಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಂಗಡಿ ಮಳಿಗೆಗಳಿಗೆ ನುಗ್ಗಿತ್ತು. ಈ ಭಾಗದಲ್ಲಿ ಚರಂಡಿಗಳಿದ್ದರೂ ಸಹ ಅವುಗಳ ಮೇಲೆ ಅಂಗಡಿಯವರು ಕಲ್ಲು ಚಪ್ಪಡಿಗಳನ್ನು ಹಾಕಿ ಮುಚ್ಚಿದ್ದರು. ಇದನ್ನು ಮನಗಂಡ ಪೌರಾಯುಕ್ತರು, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ ಜೊತೆಗೂಡಿ ಚರಂಡಿಗಳಲ್ಲಿ ಹೂಳನ್ನು ತೆಗೆಸುವ ಕಾರ್ಯ ಮಾಡಿದರು. ನಂತರ ಮಾತನಾಡಿದ ಪೌರಾಯುಕ್ತ ರುದ್ರೇಶ್ ಅವರು, ಶಿರಾ ನಗರದಲ್ಲಿ ಚರಂಡಿಗಳ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿ ಮುಚ್ಚಿರುವವರು ಅವುಗಳನ್ನು ತೆರವುಗೊಳಿಸಿ ಚರಂಡಿಯಲ್ಲಿರುವ ಹೂಳನ್ನು ತೆಗೆಯಲು ನಗರಸಭಾ ಸಿಬ್ಬಂದಿಗೆ ಸಹಕಾರ ನೀಡಬೇಕು. ಚರಂಡಿಯಲ್ಲಿ ನೀರು ಸರಾಗವಾಗಿ ಹೋಗದಿದ್ದರೆ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಿ ನೀರು ಮನೆಯೊಳಗೆ ನುಗ್ಗುತ್ತದೆ. ಆದ್ದರಿಂದ ಸಾರ್ವಜನಿಕರು ನಗರಸಭೆಯ ಸಿಬ್ಬಂದಿಗೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಸಹಕಾರ ನೀಡಿ ಎಂದು ತಿಳಿಸಿದರು.
ನಗರಸಭಾ ಸದಸ್ಯ ರಾಧಾಕೃಷ್ಣ, ನಗರಸಭೆ ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಮಾಜಿ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಆರೋಗ್ಯ ನಿರೀಕ್ಷಕ ಜಗನ್ನಾಥ್ ಸೇರಿ ನಗರಸಭೆ ಸಿಬ್ಬಂದಿ ಹಾಜರಿದ್ದರು.