ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್) ಮೂಲಕ ಬರ ನಿರ್ವಹಣೆ ಕುರಿತು ಅಣಕು ಪ್ರದರ್ಶನದ ಮುಖಾಂತರ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಡಾ ಎಸ್.ಎಂ. ಶೀಲಾ ಮಾತನಾಡಿ, ಪ್ರಸ್ತುತ ಹಾಗೂ ಮುಂಬರುವ ಬೇಸಿಗೆಯ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೂರ್ಯ ಶಾಖದ ಹೊಡೆತ (ಹೀಟ್ ವೇವ್ ಸ್ಟ್ರೋಕ್) ದಿಂದಾಗಿ ಸಾರ್ವಜನಿಕರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಾರ್ವಜನಿಕರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಬೆಳಗ್ಗೆ 10ರಿಂದ ಸಂಜೆವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯನ್ನು ತಲೆಗೆ ಹಚ್ಚಿಕೊಂಡು ಸಾಧ್ಯವಾದಷ್ಟೂ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾಗೂ ಚರ್ಮದ ಆರೋಗ್ಯಕ್ಕೆ ಪೂರಕವಾದ ಲೋಷನ್ ಗಳನ್ನು ಬಳಸುವುದು ಉತ್ತಮ. ತಿಳಿ ಬಣ್ಣದ ಬಟ್ಟೆ ಅಥವಾ ಹತ್ತಿಯಿಂದ ತಯಾರಿಸಿದ ನೈಸರ್ಗಿಕ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಗಾಢ ಬಣ್ಣದ ಪಾಲಿಸ್ಟರ್ ಹಾಗೂ ಸಿಂಥೆಟಿಕ್ ಬಟ್ಟೆಗಳನ್ನು ಉಪಯೋಗಿಸುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು ಸೂಕ್ತ. ಸಾರ್ವಜನಿಕರು ಸೂರ್ಯಾಘಾತದ ದಿನಗಳಲ್ಲಿ ಹೆಚ್ಚಿನ ಶಾಖದಿಂದ ದೇಹವನ್ನು ರಕ್ಷಿಸಿಕೊಳ್ಳಲು ಕೊಡೆ/ಛತ್ರಿ, ಟೋಪಿ/ಹ್ಯಾಟ್, ಟವಲ್ ಬಳಸುವುದು ಸರಿಯಾದ ಕ್ರಮ. ಕಣ್ಣುಗಳ ಆರೋಗ್ಯದ ದೃಷ್ಟಿಯಿಂದ ತಂಪು ಕನ್ನಡಕ (ಕೂಲಿಂಗ್ ಗ್ಲಾಸ್) ಧರಿಸಬೇಕು ಹಾಗೂ ಸಾಧ್ಯವಾದಷ್ಟೂ ತಂಪಾದ ಸ್ಥಳಗಳಲ್ಲಿ ನಿಲ್ಲಲು, ಕುಳಿತುಕೊಳ್ಳಲು ಹಾಗೂ ಉಳಿಯಲು ಪ್ರಯತ್ನಿಸಬೇಕು. ಸಾಕಷ್ಟು ನೀರು ಕುಡಿಯುವ ಮೂಲಕ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ ಆದಷ್ಟೂ ಸಮಶೀತೋಷ್ಣ ಸ್ಥಿತಿಯಲ್ಲಿಟ್ಟುಕೊಳ್ಳಲು ಗಮನಹರಿಸಬೇಕು ಎಂದು ಸಲಹೆ ನೀಡಿದರು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ರಕ್ಷಣಾ ಅಧಿಕಾರಿ ಎಚ್. ಎನ್.ದೇವರಾಜ್ ಮಾತನಾಡಿ, ಆಕಸ್ಮಿಕ ದುರಂತಗಳಿಂದ ಸಂಭವಿಸುವ ಸಾವು, ನೋವುಗಳು ಮತ್ತು ಕಷ್ಟ, ನಷ್ಟಗಳನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಪರಿಣಾಮಕಾರಿಯಾಗಿ ಕೆಲಸ ಮಾಡಿ ನಾಗರಿಕರು, ಜಾನುವಾರುಗಳ ಪ್ರಾಣವನ್ನು ರಕ್ಷಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ.
ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಯಾವುದೇ ಇಲಾಖೆಯ ಅಧಿಕಾರಿಗಳ ತಂಡ ವಿಪತ್ತು ಉಂಟಾದ ಸ್ಥಳಕ್ಕೆ ದಿಢೀರ್ ಬರಲು ಸಾಧ್ಯವಿಲ್ಲ. ಆದ್ದರಿಂದ ಸ್ಥಳೀಯ ಜನರಲ್ಲಿ ಜಾಗೃತಿ ಇದ್ದಲ್ಲಿ ಬಹಳಷ್ಟು ಅಥವಾ ಬಹುತೇಕ ಸಮಸ್ಯೆಗಳು ದೂರವಾಗಲಿವೆ, ಈ ಕುರಿತ ಸೂಕ್ತ ಮಾರ್ಗದರ್ಶನವನ್ನು ಅಣಕು ಪ್ರದರ್ಶನದ ಮೂಲಕ ಮನವರಿಕೆ ಮಾಡಿಕೊಡಲಾಗಿದೆ ಎಂದರು.ಸುಮಾರು ಅರ್ಧ ಗಂಟೆ ಕಾಲ ಪ್ರದರ್ಶನಗೊಂಡ ಅಣಕು ಪ್ರದರ್ಶನದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಣಕು ಪ್ರದರ್ಶನ ವೀಕ್ಷಿಸಿ ಪ್ರಯೋಜನ ಪಡೆದರು.
ತಹಸೀಲ್ದಾರ್ ವಿ.ರಶ್ಮಿ, ಪ್ರಾಂಶುಪಾಲ ಡಾ. ಮುನಿರಾಜು, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುಳ, ಎನ್ ಡಿಆರ್ ಎಫ್ ನ ಅಖಿಲೇಶ್, ಸುರೇಶ್ ಕುಮಾರ್ ರೆಡ್ಡಿ, ಹರೀಶ್ ಪಾಂಡೆ ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.--------
ಸಿಕೆಬಿ-5 ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ವತಿಯಿಂದ ಬರ ನಿರ್ವಹಣೆ ಕುರಿತು ಅಣಕು ಪ್ರದರ್ಶನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.