ಹೂವಿನಹಡಗಲಿ: ಇಲ್ಲಿನ ಪುರಸಭೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಹಿತ ದೃಷ್ಠಿಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ, ಮೂತ್ರಾಲಯಗಳು ನಿರ್ಮಿಸಿ 5 ತಿಂಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ.
ಹೂವಿನಹಡಗಲಿ ತಾಲೂಕು ಕೇಂದ್ರವಾಗಿದ್ದರೂ ಸಾರ್ವಜನಿಕರು ಮೂತ್ರಾಲಯ, ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿ ಇದೆ. ಪಟ್ಟಣಕ್ಕೆ ಬಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂಬ ಕೂಗು ಹೆಚ್ಚಾಗಿತ್ತು. ಇದರನ್ವಯ ಪುರಸಭೆಯಿಂದ ಸ್ವಚ್ಛ ಭಾರತ್ ಮಿಷನ್ ನಡಿಯಲ್ಲಿ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ₹13 ಲಕ್ಷ ವೆಚ್ಚ ತಾಲೂಕು ಕಚೇರಿ, ಎಪಿಎಂಸಿ ಕಚೇರಿಯಲ್ಲಿ ತಲಾ ₹7 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಉಳಿದಂತೆ ತೋಟದ ರಸ್ತೆ, ಪಂಹಸಾಗರ ರಸ್ತೆ, ಸಂತೆ ಬಜಾರ್ ಬಳಿ ತಲಾ ₹1 ಲಕ್ಷ ವೆಚ್ಚದಲ್ಲಿ ಮೂತ್ರಾಲಯ ನಿರ್ಮಿಸಿದ್ದಾರೆ. ಅವುಗಳು ನಿರ್ಮಾಣಗೊಂಡು 5 ತಿಂಗಳು ಕಳೆದಿವೆ. ಆದರೂ ಉದ್ಘಾಟನೆ ಮಾತ್ರ ಆಗುತ್ತಿಲ್ಲ, ಇದರಿಂದ ಸಾರ್ವಜನಿಕರು ಶೌಚ ಹಾಗೂ ಮೂತ್ರ ವಿಸರ್ಜನೆಗೆ ಪರದಾಡುತ್ತಿರುವ ಪರಿಸ್ಥಿತಿ ಬಂದಿದೆ.ಪಟ್ಟಣದಲ್ಲಿ ನಿರ್ಮಿಸಿದ ಮೂರು ಮೂತ್ರಾಲಯಗಳಿಗೆ ಈ ವರೆಗೂ ಒಳ ಚರಂಡಿ ಗುಂಡಿಗಳಿಗೆ ಸಂಪರ್ಕ ಕಲ್ಪಿಸಿಲ್ಲ, ಆದರಿಂದ ಇವುಗಳನ್ನು ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಲ್ಲ.
ಪಟ್ಟಣದಲ್ಲಿ ಶೌಚಾಲಯ, ಮೂತ್ರಾಲಯ ಕಟ್ಟಲಾಗಿದೆ. ಆದರೆ ಆಯಾ ಇಲಾಖೆಗಳಿಗೆ ಈವರೆಗೂ ಪುರಸಭೆಯಿಂದ ಹಸ್ತಾಂತರವಾಗಿಲ್ಲ, ತಾಲೂಕು ಕಚೇರಿ, ಬಸ್ ನಿಲ್ದಾಣ ಮತ್ತು ಎಪಿಎಂಸಿ ಬಳಿ ನಿರ್ಮಿಸಿದ ಶೌಚಾಲಯಗಳಲ್ಲಿ ಮೂತ್ರಾಲಯದ ವ್ಯವಸ್ಥೆಯೇ ಇಲ್ಲ. ಮತ್ತೆ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಇಡೀ ಪಟ್ಟಣದಲ್ಲಿ ಹಳೆ ಬಸ್ ನಿಲ್ದಾಣದ ಎದುರು ಮತ್ತು ಹೊಸ ಬಸ್ ನಿಲ್ದಾಣದಲ್ಲಿ ಮಾತ್ರ ಇವೆ. ಉಳಿದ ಯಾವ ಕಡೆಗೂ ಮೂತ್ರಾಲಯ, ಶೌಚಾಲಯದ ವ್ಯವಸ್ಥೆ ಇಲ್ಲ. ಈಗ ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ ಉದ್ಘಾಟನೆಯಾಗಿಲ್ಲ. ಒಟ್ಟಾರೆ ಶೌಚಾಲಯ ಕಟ್ಟಡ ಮಾತ್ರ ಕಟ್ಟಿಸಿದ್ದಾರೆ, ಜನರ ಉಪಯೋಗಕ್ಕೆ ಇಲ್ಲದಂತಾಗಿವೆ.
ತೋಟದ ರಸ್ತೆಯಲ್ಲಿ ನಿರ್ಮಿಸಿದ 1 ಲಕ್ಷ ವೆಚ್ಚದ ಮೂತ್ರಾಲಯದ ಮುಂದೆ ಬೀದಿ ಬದಿ ವ್ಯಾಪಾರಸ್ಥರು, ತಮ್ಮ ಗೂಡಂಗಡಿ ಇಟ್ಟು ದಾರಿ ಬಂದ್ ಮಾಡಿದ್ದಾರೆ.
ಪಟ್ಟಣದಲ್ಲಿ ಮೂರು ಕಡೆ ಶೌಚಾಲಯ,ಇನ್ನು ಮೂರು ಕಡೆಗಳಲ್ಲಿ ಮೂತ್ರಾಲಯ ಸ್ವಚ್ಛ ಭಾರತ್ ಮಿಷನ್ನಡಿಯಲ್ಲಿ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಿವೆ. ಆಯಾ ಇಲಾಖೆಯ ಹಸ್ತಾಂತರಕ್ಕೆ ಪತ್ರ ಬರೆಯಲಾಗಿದೆ ಎಂದು ಹೂವಿನಹಡಗಲಿ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶೌಚಾಲಯ, ಮೂತ್ರಾಲಯಕ್ಕೆ ಹೋಗುವುದು ಬಹಳ ಕಷ್ಟದ ಸ್ಥಿತಿ ಇದೆ. ಪುರುಷರು ಹೊರಗಡೆ ಹೋಗುತ್ತಾರೆ, ಆದರೆ ಮಹಿಳೆಯರ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ, ಸಂಬಂಧಪಟ್ಟವರು ಮೊದಲು ಶೌಚಾಲಯ, ಮೂತ್ರಾಲಯ ತೆರೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ತಿಳಿಸಿದ್ದಾರೆ.