ಭಾರತೀಯ ವ್ಯಾಕರಣ ಪರಂಪರೆಯನ್ನು ಕೇವಲ ಸಂಸ್ಕೃತಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಾಲಿ ಸಂಸ್ಕೃತ, ಪ್ರಾಕೃತ ಮತ್ತು ಇತರ ಭಾರತೀಯ ಭಾಷೆಗಳು ತಮ್ಮದೇ ಆದ ವ್ಯಾಕರಣ ವಿಶ್ಲೇಷಣೆಯ ಪರಂಪರೆ ಮತ್ತು ಇತಿಹಾಸವನ್ನು ಹೊಂದಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯ ಭಾಷೆಗಳು ಮತ್ತು ದೃಷ್ಟಿಕೋನಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಭಾಷಾ ವಿಜ್ಞಾನದ ಸುಮಾರು 75 ಪರಿಚಯಾತ್ಮಕ ಪುಸ್ತಕಗಳನ್ನು ಸಿಐಐಎಲ್‌ ಸಿದ್ಧಪಡಿಸುತ್ತಿದೆ ಎಂದು ಸಂಸ್ಥೆ ನಿರ್ದೇಶಕ ಪ್ರೊ.ಬಸವರಾಜ ಕೊಡಗುಂಟಿ ಹೇಳಿದರು.

ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು ಭಾರತೀಯ ವ್ಯಾಕರಣ ಪರಂಪರೆ ವಿಷಯ ಕುರಿತು ಆಯೋಜಿಸಿರುವ ಎರಡು ವಾರಗಳ ದಿಕ್ಸೂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ಪೈಕಿ ಸುಮಾರು 15 ಸಂಪುಟಗಳು ಭಾರತೀಯ ವ್ಯಾಕರಣ ಪರಂಪರೆಯ ಮೇಲೆ ಗಮನ ಹರಿಸಲಿದ್ದು, ಇತರ ಪುಸ್ತಕಗಳು ಧ್ವನಿವಿಜ್ಞಾನ, ರೂಪವಿಜ್ಞಾನ, ವಾಕ್ಯವಿಜ್ಞಾನ ಮತ್ತು ಅರ್ಥವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ದೃಷ್ಟಿಕೋನವನ್ನು ಒಳಗೊಂಡಿರುತ್ತವೆ ಎಂದರು.

ಯುವ ಪೀಳಿಗೆಯು, ವಿಶೇಷವಾಗಿ ಶಿಕ್ಷಕರು ಮತ್ತು ಸಂಶೋಧಕರು ಈ ಅಧ್ಯಯನ ಮುಂದುವರಿಸಿಕೊಂಡು ಹೋಗಬೇಕು ಮತ್ತು ತಮ್ಮ ಶೈಕ್ಷಣಿಕ ಕೆಲಸಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಭಾರತೀಯ ವ್ಯಾಕರಣ ಪರಂಪರೆಯನ್ನು ಕೇವಲ ಸಂಸ್ಕೃತಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಾಲಿ ಸಂಸ್ಕೃತ, ಪ್ರಾಕೃತ ಮತ್ತು ಇತರ ಭಾರತೀಯ ಭಾಷೆಗಳು ತಮ್ಮದೇ ಆದ ವ್ಯಾಕರಣ ವಿಶ್ಲೇಷಣೆಯ ಪರಂಪರೆ ಮತ್ತು ಇತಿಹಾಸವನ್ನು ಹೊಂದಿವೆ. ವಿವಿಧ ಭಾಷಿಕ ಪರಂಪರೆಗಳ ನಡುವಿನ ಪರಸ್ಪರ ಸಂವಹನವು ಭಾರತದ ಬೌದ್ಧಿಕ ಇತಿಹಾಸದ ಪ್ರಮುಖ ಲಕ್ಷಣವಾಗಿದೆ ಎಂದರು.

ಈ ಕಾರ್ಯಕ್ರಮಕ್ಕೆ ವ್ಯಕ್ತವಾಗಿರುವ ಸ್ಪಂದನೆಯು ಭಾರತದ ವ್ಯಾಕರಣ ಪರಂಪರೆಗಳ ನಿರಂತರ ಅಧ್ಯಯನದ ಅಗತ್ಯವನ್ನು ತೋರಿಸುತ್ತದೆ. ದೇಶ ಮತ್ತು ನೆರೆಹೊರೆಯ ದೇಶಗಳ ವಿವಿಧ ಪ್ರದೇಶಗಳು, ಭಾಷೆಗಳು ಮತ್ತು ಕ್ಷೇತ್ರಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳಿಂದ ಸಿಐಐಎಲ್ ಸುಮಾರು 900 ಅರ್ಜಿಗಳನ್ನು ಸ್ವೀಕರಿಸಿತ್ತು. ತಮಿಳು ಮತ್ತು ಕನ್ನಡದಿಂದ ಹಿಡಿದು ಈಶಾನ್ಯ ಹಾಗೂ ಭಾರತದ ಇತರ ಭಾಗಗಳಲ್ಲಿ ಮಾತನಾಡುವ ಭಾಷೆಗಳವರೆಗೆ ಹಲವು ಭಾಷೆಗಳಲ್ಲಿ ಕೆಲಸ ಮಾಡುತ್ತಿರುವವರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಅವರು ವಿವರಿಸಿದರು.

ಪುಣೆಯ ಡೆಕ್ಕನ್‌ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ ಕುಲಪತಿ ಪ್ರೊ. ಪ್ರಸಾದ್ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಭಾರತೀಯ ವ್ಯಾಕರಣ ಪಾಂಡಿತ್ಯವು ಭಾಷೆಯ ವೈಜ್ಞಾನಿಕ ಅಧ್ಯಯನಕ್ಕೆ ನೀಡಿದ ಪ್ರಮುಖ ಕೊಡುಗೆ. ಭಾರತೀಯ ಪರಂಪರೆಯು ನಿಯಮಗಳು ಮತ್ತು ಅವುಗಳ ಅನ್ವಯದ ಮೂಲಕ ಭಾಷೆಯನ್ನು ವಿಶ್ಲೇಷಿಸುವ ವ್ಯವಸ್ಥಿತ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಪಾಣಿನಿಯ ‘ಅಷ್ಟಾಧ್ಯಾಯೀ’ಯು ಅತ್ಯಂತ ವ್ಯವಸ್ಥಿತವಾಗಿ ಸಂಘಟಿತವಾದ ನಿಯಮಗಳ ಗುಂಪು ಹೇಗೆ ವಿಶಾಲ ಶ್ರೇಣಿಯ ಭಾಷಿಕ ಅಭಿವ್ಯಕ್ತಿಗಳನ್ನು ವಿವರಿಸಬಲ್ಲದು ಎಂಬುದನ್ನು ತೋರಿಸಿಕೊಡುತ್ತದೆ ಎಂದರು.

ಭಾರತೀಯ ವ್ಯಾಕರಣ ಪರಂಪರೆಯ ಅಧ್ಯಯನವು ಸಂಸ್ಕೃತವನ್ನು ಮೀರಿ ಪಾಲಿಸಂಸ್ಕೃತ, ಪ್ರಾಕೃತ, ತಮಿಳು ಮತ್ತು ಇತರ ಭಾಷೆಗಳಿಗೆ ಸಂಬಂಧಿಸಿದ ಪರಂಪರೆಯನ್ನೂ ಒಳಗೊಂಡಿದೆ. ವ್ಯಾಕರಣವನ್ನು ಭಾಷೆಯ ವಿವಿಧ ಆಯಾಮಗಳಿಗೆ ಸಂಬಂಧಿಸಿದ ವಿಶಾಲ ಕ್ಷೇತ್ರ ಎಂದು ಬಣ್ಣಿಸಿದರು.

ಪುಣೆ ವಿವಿಯ ಸಂಸ್ಕೃತ ಮತ್ತು ಪ್ರಾಕೃತ ಭಾಷಾ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಸರೋಜಾ ಭಾಟೆ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಭಾರತೀಯ ವ್ಯಾಕರಣ ಪಾಂಡಿತ್ಯವು ಭಾಷಾ ಅಧ್ಯಯನಕ್ಕೆ ಮಾತ್ರವಲ್ಲದೆ ವ್ಯಾಪಕ ಬೌದ್ಧಿಕ ಪರಂಪರೆಗೂ ಕೊಡುಗೆ ನೀಡಿದೆ. ಪಾಣಿನಿ ಮತ್ತು ಪತಂಜಲಿ ಅವರ ಕೃತಿಗಳು ಜ್ಞಾನದ ವ್ಯವಸ್ಥಿತ ವಿಧಾನಗಳ ಅಭಿವೃದ್ಧಿಯ ಮೇಲೆ ಪ್ರಭಾವ ಬೀರಿವೆ. ಭಾಷಾವಿಜ್ಞಾನದ ಇತಿಹಾಸದಲ್ಲಿ ಭಾರತೀಯ ವ್ಯಾಕರಣ ಅಧ್ಯಯನಗಳ ಪ್ರಾಮುಖ್ಯತೆ ಅಪಾರ. ಭಾಷಾ ಚಿಂತನೆಗೆ, ಅದರಲ್ಲೂ ವಿಶೇಷವಾಗಿ ಸಂಸ್ಕೃತ ಮತ್ತು ಧ್ವನಿವಿಜ್ಞಾನದ ಅಧ್ಯಯನಕ್ಕೆ ಭಾರತ ನೀಡಿದ ಕೊಡುಗೆಯನ್ನು ಹಲವಾರು ಪಾಶ್ಚಿಮಾತ್ಯ ವಿದ್ವಾಂಸರು ಗುರುತಿಸಿದ್ದಾರೆ ಎಂದರು.

ಭಾರತದ ಭಾಷಿಕ ಪರಂಪರೆಯನ್ನು ಸಂಸ್ಕೃತದ ಜೊತೆಗೆ ಪಾಲಿಸಂಸ್ಕೃತ, ಪ್ರಾಕೃತ ಮತ್ತು ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಂತೆ ಸಮಗ್ರವಾಗಿ ನೋಡಬೇಕು. ವ್ಯಾಕರಣವನ್ನು ಕೇವಲ ಸಂಕುಚಿತ ವಿಷಯವಾಗಿ ನೋಡದೆ ಭಾಷೆ, ಸಂಸ್ಕೃತಿ, ಸಂವಹನ ಮತ್ತು ಬೌದ್ಧಿಕ ಬೆಳವಣಿಗೆಯೊಂದಿಗೆ ಅದಕ್ಕಿರುವ ಸಂಬಂಧವನ್ನು ಅರ್ಥೈಸಿಕೊಳ್ಳುವಂತೆ ಅವರು ಕರೆ ನೀಡಿದರು.

ಸಿಐಐಎಲ್‌ನ ಎಲ್-ಜೆಆರ್‌ಒ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಸುಜೋಯ್ ಸರ್ಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ವ್ಯಾಕರಣ ಪರಂಪರೆಗಳೊಂದಿಗೆ ವ್ಯವಸ್ಥಿತವಾಗಿ ತೊಡಗಿಸಿಕೊಳ್ಳಲು ಹೆಚ್ಚಿನ ಅವಕಾಶ ಸೃಷ್ಟಿಸುವ ಅಗತ್ಯವಿದೆ. ದೇಶದ ನಾನಾ ಭಾಗಗಳಿಂದ ಬಂದ ಅರ್ಜಿಗಳ ದೊಡ್ಡ ಸಂಖ್ಯೆಯು ಈ ವಿಷಯದಲ್ಲಿ ಬೆಳೆಯುತ್ತಿರುವ ಶೈಕ್ಷಣಿಕ ಆಸಕ್ತಿಯನ್ನು ಎತ್ತಿಹಿಡಿದಿದೆ ಎಂದರು.

ಸಿಐಐಎಲ್‌ ನ ಸಹಾಯಕ ನಿರ್ದೇಶಕ ಡಾ.ಪಂಕಜ್ ದ್ವಿವೇದಿ ವಂದಿಸಿದರು. ಸೆ.14ರವರೆಗೆ ನಡೆಯುವ ಈ ಕಾರ್ಯಕ್ರಮವನ್ನು ವಿವಿಧ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು, ಐಐಟಿಗಳು, ಐಐಐಟಿಗಳು ಮತ್ತು ಸಿಐಐಎಲ್‌ ನ 22 ತಜ್ಞರು ನಡೆಸಿಕೊಡಲಿದ್ದು, 56 ಶೈಕ್ಷಣಿಕ ಗೋಷ್ಠಿಯನ್ನು ಒಳಗೊಂಡಿದೆ. ದೇಶಾದ್ಯಂತದ ವಿವಿಧ ವಿವಿಗಳು ಮತ್ತು ಭಾಷಾ ಸಂಶೋಧನಾ ಸಂಸ್ಥೆಗಳನ್ನು ಪ್ರತಿನಿಧಿಸುವ 163 ನೋಂದಾಯಿತ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು.