ನಾವು ಮಾಡುವ ಕಾರ್ಯಗಳೇ ನಮಗೆ ಒಳ್ಳೆಯ ಹೆಸರು ತಂದುಕೊಡಬೇಕು ಹೊರತು ದಾಖಲೆಗಳ ಅಗತ್ಯವಿಲ್ಲ ಎನ್ನುವ ಮುಖ್ಯಶಿಕ್ಷಕ ಡಿ.ಚೇತನ್ ಇತರರಿಗೆ ಮಾದರಿ. ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಮುಂದೆ ಬರುವ ಶಿಕ್ಷಕರಿಗೆ ದಾರಿದೀಪವಾಗುತ್ತವೆ. ದಾಖಲೆ ಇಲ್ಲದೆ ಸರ್ಕಾರದಿಂದಲೂ ಯಾವುದೇ ಪ್ರೋತ್ಸಾಹ ಸಿಗುವುದಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ದಾಖಲೆಗಳಿಲ್ಲದೆ ದೇಶದಲ್ಲಿ ಅದೆಷ್ಟೋ ಇತಿಹಾಸಗಳು ಅಳಿಸಿ ಹೋಗಿವೆ. ಹಾಗಾಗಿ ಇಂದಿನ ಕಾಲದಲ್ಲಿ ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರಚಾರ ಮತ್ತು ದಾಖಲೆ ಅತ್ಯವಶ್ಯಕ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ ಹೇಳಿದರು.ಪಟ್ಟಣದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ನಾಗಮಂಗಲ ಕನ್ನಡ ಸಂಘದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಶಿಕ್ಷಕರಿಗಾಗಿ ರಸಪ್ರಶ್ನೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನಾವು ಮಾಡುವ ಕಾರ್ಯಗಳೇ ನಮಗೆ ಒಳ್ಳೆಯ ಹೆಸರು ತಂದುಕೊಡಬೇಕು ಹೊರತು ದಾಖಲೆಗಳ ಅಗತ್ಯವಿಲ್ಲ ಎನ್ನುವ ಮುಖ್ಯಶಿಕ್ಷಕ ಡಿ.ಚೇತನ್ ಇತರರಿಗೆ ಮಾದರಿ. ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಮುಂದೆ ಬರುವ ಶಿಕ್ಷಕರಿಗೆ ದಾರಿದೀಪವಾಗುತ್ತವೆ. ದಾಖಲೆ ಇಲ್ಲದೆ ಸರ್ಕಾರದಿಂದಲೂ ಯಾವುದೇ ಪ್ರೋತ್ಸಾಹ ಸಿಗುವುದಿಲ್ಲ. ಹಾಗಾಗಿ ಇಂದಿನ ಕಾಲದಲ್ಲಿ ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರಚಾರ ಮತ್ತು ದಾಖಲೆ ಅತ್ಯವಶ್ಯಕ ಎಂದರು.ಶಾಲೆಗಳಲ್ಲಿ ಪಠ್ಯದ ಜೊತೆಗೆ ಸಣ್ಣ ಪುಟ್ಟ ಕಾಗದ, ಪರಿಕರಗಳನ್ನು ಉಪಯೋಗಿಸಿಕೊಂಡು ಮಾದರಿ ಹಾಗೂ ಪ್ರಯೋಗಗಳ ಮೂಲಕ ಮಾಡುವ ಪಾಠ ಪ್ರವಚನಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಜೊತೆಗೆ ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ. ಶಾಲಾ ಮಕ್ಕಳ ಪ್ರತಿಭೆ ಉತ್ತೇಜಿಸಲು ಸರ್ಕಾರ ಪ್ರತಿ ವರ್ಷ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಿ.ಚೇತನ್ ಮಾತನಾಡಿ, ಮಕ್ಕಳು ಖುಷಿಯಾಗಿ ಶಾಲೆಗೆ ಬಂದು ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರಿ ಶಾಲೆಯಲ್ಲಿ ಉತ್ತಮ ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಕಲಿಕೆಗೆ ಪೂರಕವಾದ ಎಲ್ಲ ಬಗೆಯ ಸೌಲಭ್ಯಗಳಲ್ಲಿ ಉಚಿತವಾಗಿ ಕಲ್ಪಿಸಲಾಗಿದೆ ಎಂದರು.ಸಮಾರಂಭದಲ್ಲಿ ತಾಲೂಕಿನ ಕೂಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಿ.ಚೇತನ್ ಅವರಿಗೆ ಪಟ್ಟಣದ ಎನ್.ವಿ.ಸುಬ್ಬರಾವ್ ಕುಟುಂಬಸ್ಥರು ಕೊಡಮಾಡುವ 5 ಸಾವಿರ ನಗದು, ನೆನಪಿನ ಕಾಣಿಕೆ ಒಳಗೊಂಡ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕೆ.ಆರ್.ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಗಂಗಾಧರಯ್ಯ ಅವರು ನಡೆಸಿಕೊಟ್ಟ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷ ಅಶೋಕ್, ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ, ಕಾರ್ಯದರ್ಶಿ ಉಮಾ ಮೂರ್ತಿ, ಸಂಘಟನಾ ಕಾರ್ಯದರ್ಶಿ ಲ.ಬಾಲಕೃಷ್ಣ, ಖಜಾಂಚಿ ರಾಜಶೇಖರ್, ಶಿಕ್ಷಕ ಮುರಳೀಧರ್ ಸೇರಿದಂತೆ ಸಂಘದ ಸದಸ್ಯರು ಮತ್ತು ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.