ಸ್ವಚ್ಛ ಭಾರತ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅವಶ್ಯ: ನಾಗೇಶ ಹುಬ್ಬಳ್ಳಿ

| Published : Nov 11 2024, 11:45 PM IST

ಸ್ವಚ್ಛ ಭಾರತ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅವಶ್ಯ: ನಾಗೇಶ ಹುಬ್ಬಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛ ಭಾರತ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.

ಮುಂಡರಗಿ: ವಿದೇಶಿಗರು ನಮ್ಮ ದೇಶದಲ್ಲಿ ಕಸ ಹಾಗೂ ಬಯಲು ಬಹಿರ್ದೆಸೆ ಸೇರಿದಂತೆ ಇಲ್ಲಿನ ವಾತಾವರಣವನ್ನು ನೋಡಿ ಮೂಗು ಮುರಿದ್ದರು. ಅದನ್ನೆಲ್ಲ ಸೂಕ್ಷ್ಮವಾಗಿ ಯೋಚಿಸಿದ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಇದರ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.

ಸೋಮವಾರ ಜ.ಅ. ವಿದ್ಯಾ ಸಮಿತಿಯ ಶತಮಾನೋತ್ಸವ ಸಂಭ್ರಮ, ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ವಿಭಾಗ ಹಾಗೂ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಮುಂಡರಗಿ, ಜ.ಅ.ಪ.ಪೂ. ಮಹಾವಿದ್ಯಾಲಯ ಮತ್ತು ಎಂ.ಎಸ್. ಡಂಬಳ ಮಹಿಳಾ ಪಪೂ ಮಹಾವಿದ್ಯಾಲಯ ಎನ್.ಎಸ್.ಎಸ್. ಘಟಕಗಳು ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸಲು ಎಲ್ಲರಿಗೂ ಶೌಚಾಲಯ ನಿರ್ಮಾಣಕ್ಕಾಗಿ ಹಣ ನೀಡುತ್ತಿದ್ದು, ಇನ್ನೂ ಕೆಲವೆಡೆ ಬಯಲು ಬಹಿರ್ದೆಸೆ ನಡೆದೇ ಇದೆ. ಎಲ್ಲರೂ ಶೌಚಾಲಯ ಕಟ್ಟಿಕೊಳ್ಳುವ ಮೂಲಕ ಸ್ವಚ್ಛ ಭಾರತದ ಯಶಸ್ವಿಗೆ ಮುಂದಾಗಬೇಕು. ಇದೀಗ ಸ್ವಚ್ಛ ಸಮುದಾಯ ಕಾರ್ಯಕ್ರಮಕ್ಕಾಗಿ 5 ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಸ್ವಚ್ಛತೆ ಕೈಗೊಳ್ಳುವ ಮೂಲಕ ಜನತೆಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ಪುರಸಭೆ ಸ್ವಚ್ಛತಾ ವಿಭಾಗದ ಅಧಿಕಾರಿ ಶಾರದಾ ಕೆ.ವಿ. ಮಾತನಾಡಿ, ಕಸವನ್ನು ಉತ್ಪಾದನೆ ಮಾಡುವವರಿಗೆ ಅದನ್ನು ಅದನ್ನು ವಿಲೇಮಾರಿ ಮಾಡುವ ಜವಾಬ್ದಾರಿಯೂ ಇರುತ್ತದೆ ಎನ್ನುವುದನ್ನು ಮೊದಲು ನಾವೆಲ್ಲರೂ ತಿಳಿದುಕೊಳ್ಳಬೇಕು. ಮನೆ ಮನೆಯಿಂದ ಬರುವ ಕಸವನ್ನು ಹಸಿ ಹಾಗೂ ಒಣ ಕಸವನ್ನಾಗಿ ವಿಂಗಡಿಸಿಡಬೇಕು. ಸ್ವಚ್ಛತೆ ಎನ್ನುವುದು ಮೊದಲು ನಮ್ಮಿಂದ, ನಂತರ ನಮ್ಮ ಮನೆ, ಓಣಿ, ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ಎಲ್ಲೆಡೆ ವಿಸ್ತಾರವಾಗಬೇಕು ಎಂದು ತಿಳಿಸಿದರು.ನಮ್ಮ ಪಟ್ಟಣ ಸ್ವಚ್ಛವಾಗಿದ್ದರೆ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ. ಆದ್ದರಿಂದ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೊರೋನಾ ಸಂದರ್ಭದಲ್ಲಿ ಎಲ್ಲರೂ ಮನೆಯಿಂದ ಹೊರ ಬರದೇ ಮನೆಯಲ್ಲಿಯೇ ಇದ್ದರು. ನಮ್ಮ ಪೌರ ಕಾರ್ಮಿಕರು ಮಾತ್ರ ನಿತ್ಯ ಮನೆಗಳಿಗೆ ಬಂದು ಕಸ ತೆಗೆದುಕೊಳ್ಳುತ್ತಿದ್ದರು. ಕಸ ಕೊಡುವಾಗ ಅವರನ್ನು ಮುಟ್ಟಿಸಿಕೊಳ್ಳದೇ ಕಸಕ್ಕಿಂತ ಕಡೆಯಾಗಿ ನೋಡಿದರು. ಇಂತಹ ಕೀಳರಿಮೆ ಹೋಗಿ ಅವರೂ ನಮ್ಮಂತೆ ಮನುಷ್ಯರು ಎಂದು ತಿಳಿದು ಪ್ರೀತಿ-ಪ್ರೇಮ, ಮಮತೆಯಿಂದ ನೋಡಬೇಕು ಎಂದರು.

ಜ.ಅ.ಪ.ಪೂ. ಕಾಲೇಜಿನ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾ‍ಳ ಮಾತನಾಡಿ, ನಮ್ಮ ಸಂಸ್ಥೆಯ ಎಲ್ಲ ಕಾಲೇಜುಗಳ ಎನ್.ಎಸ್.ಎಸ್., ಎನ್.ಸಿ.ಸಿ. ವಿದ್ಯಾರ್ಥಿಗಳು ಇಂತಹ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಸಂಸ್ಥೆಯ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ರಾಜಾಸಾಬ್ ಬೆಟಗೇರಿ, ಕ.ರಾ. ಬೆಲ್ಲದ ಕಾಲೇಜಿನ ಉಪ ಕಾರ್ಯಾಧ್ಯಕ್ಷ ವೀರನಗೌಡ ಗುಡದಪ್ಪನವರ, ಎಂ.ಎಸ್. ಡಂಬಳ ಕಾಲೇಜಿನ ಕಾರ್ಯಾಧ್ಯಕ್ಷ ಎಂ.ಎಸ್. ಶಿವಶಟ್ಟರ, ಎಸ್.ಬಿ. ಹಿರೇಮಠ, ಪ್ರಾ. ಡಿ.ಸಿ.ಮಠ, ಪ್ರಾ. ಐ.ಎಂ. ಕಲ್ಲನಗೌಡರ, ಎಂ.ಸಿ. ಲ್ಯಾಂಡ್ವೆ, ಸಚಿನ್ ಎಂ. ಉಪ್ಪಾರ, ಎಂ.ಎಸ್. ಮ್ಯಾಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಸಂತೋಷ ಹಿರೇಮಠ ನಿರೂಪಿಸಿದರು.