ಸಾರಾಂಶ
ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.93.57 ಫಲಿತಾಂಶದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಮಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಂಗಳೂರು ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್, ವಾಣಿಜ್ಯ ವಿಭಾಗದಲ್ಲಿ ಕೆನರಾ ಕಾಲೇಜಿನ ದೀಪಶ್ರೀ ತಲಾ 599 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಫಲಿತಾಂಶ ಪ್ರಕಟವಾದ ಕೂಡಲೆ ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿಯವರು ಸನ್ಮಾನಿಸಿದರು.
ದ.ಕ. ದ್ವಿತೀಯ ಸ್ಥಾನಕ್ಕೆ ತೃಪ್ತಿ!:
ಕಳೆದ 5 ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗಿ ಗಮನ ಸೆಳೆಯುತ್ತಿದ್ದ ದ.ಕ. ಜಿಲ್ಲೆ ಈ ಬಾರಿ ಶೇ. 93.57 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಉಡುಪಿ ಜಿಲ್ಲೆ ಶೇ. 93.90 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.ಕಳೆದ ವರ್ಷ ದಕ್ಷಿಣ ಕನ್ನಡವು ಶೇ.97.37 ಫಲಿತಾಂಶ ದಾಖಲಿಸುವುದರೊಂದಿಗೆ ಪ್ರಥಮ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶದಲ್ಲೂ ಕುಸಿತ ಕಂಡಿದೆ.ಈ ಬಾರಿ ಜಿಲ್ಲೆಯಿಂದ ಒಟ್ಟು 36,043 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 32,903 ಮಂದಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಬಾರಿ ಪರೀಕ್ಷೆ ಬರೆದ 34,186 ವಿದ್ಯಾರ್ಥಿಗಳ ಪೈಕಿ 31,989 ಮಂದಿ ಉತ್ತೀರ್ಣರಾಗಿದ್ದು, ಖಾಸಗಿಯಾಗಿ ಪರೀಕ್ಷೆ ಬರೆದ 1556 ಮಂದಿಯಲ್ಲಿ 833 ಮಂದಿ ಉತ್ತೀರ್ಣರಾಗಿದ್ದಾರೆ. 301 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 81 ಮಂದಿ ಉತ್ತೀರ್ಣರಾಗಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ 32,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 29,950 ಮಂದಿ ಉತ್ತೀರ್ಣರಾಗಿ ಶೇ. 93.03 ಫಲಿತಾಂಶ ದಾಖಲಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ 3848 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 2953 ಮಂದಿ ಉತ್ತೀರ್ಣರಾಗಿ ಶೇ.76.74 ಫಲಿತಾಂಶ ದೊರೆತಿದೆ.
ಬಾಲಕಿಯರ ಮೇಲುಗೈ:
ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ. ಜಿಲ್ಲೆಯ 17,852 ಪುರುಷ ಅಭ್ಯರ್ಥಿಗಳಲ್ಲಿ ಶೇ. 88.8 ಮಂದಿ ಉತ್ತೀರ್ಣರಾಗಿದ್ದರೆ, ಪರೀಕ್ಷೆ ಬರೆದ 18,191 ವಿದ್ಯಾರ್ಥಿನಿಯರಲ್ಲಿ ಶೇ. 93.73ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ. 95.86 ಫಲಿತಾಂಶ ದಾಖಲಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ. 88.57, ಕಲಾ ವಿಭಾಗದಲ್ಲಿ ಶೇ. 80.86 ಫಲಿತಾಂಶ ಸಿಕ್ಕಿದೆ. ಜಿಲ್ಲೆಯಲ್ಲಿ ನಗರ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ.93.1ರಷ್ಟಿದ್ದರೆ, ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶ ಶೇ.87.51 ಆಗಿದೆ.
ಹೈಸ್ಕೂಲಲ್ಲಿ ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲಿ ಓದಿದ್ದ ದೀಪಶ್ರೀ!
ಮಂಗಳೂರು: ಹೈಸ್ಕೂಲ್‌ನಲ್ಲಿ ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲಿ ಓದಿದ್ದ ವಿದ್ಯಾರ್ಥಿನಿ ದೀಪಶ್ರೀ ಇದೀಗ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೇ ಟಾಪರ್ ಆಗಿ ಹೊರಹೊಮ್ಮಿ ಅಪೂರ್ವ ಸಾಧನೆ ಮಾಡಿದ್ದಾರೆ. ಭವಿಷ್ಯದಲ್ಲಿ ಸಿಎ ಮಾಡುವ ಕನಸಿನೊಂದಿಗೆ ಉನ್ನತ ಶಿಕ್ಷಣ ಪಡೆಯಲು ಮುಂದಾಗಿದ್ದಾರೆ.
ಈಕೆ ಬಿಕರ್ನಕಟ್ಟೆ ನಿವಾಸಿ, ಇನ್‌ವರ್ಟರ್ ಸರ್ವಿಸ್ ವೃತ್ತಿ ನಿರ್ವಹಿಸುತ್ತಿರುವ ಅಶೋಕ್ ಹಾಗೂ ಗೃಹಿಣಿ ಸುಮಾ ದಂಪತಿ ಪುತ್ರಿ. ಮಂಗಳೂರಿನ ಕೆನರಾ ಕಾಲೇಜು ವಿದ್ಯಾರ್ಥಿನಿ. ಪ್ರೌಢ ಶಿಕ್ಷಣ ಪೂರೈಸಿದ್ದು ನಾಲ್ಯಪದವು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ.
ರ್‍ಯಾಂಕ್ ನಿರೀಕ್ಷೆಯಿತ್ತು:
ಸಿಎ ಓದಬೇಕೆಂಬ ಗುರಿ ಇದ್ದುದರಿಂದಲೇ ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಆಯ್ಕೆ ಮಾಡಿದ್ದೆ. ರ್‍ಯಾಂಕ್ ದೊರೆಯುವ ನಿರೀಕ್ಷೆಯಿತ್ತು. ಆದರೆ ಪ್ರಥಮ ರ್‍ಯಾಂಕ್ ಸಿಗುತ್ತದೆ ಎಂದುಕೊಂಡಿರಲಿಲ್ಲ. ಶಿಕ್ಷಕರ ಪ್ರೋತ್ಸಾಹ, ಹೆತ್ತವರ ಬೆಂಬಲ- ತ್ಯಾಗದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ದೀಪಶ್ರೀ ಹೇಳಿಕೊಂಡರು.
ತರಗತಿಯಲ್ಲಿ ಉಪನ್ಯಾಸಕರ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದೆ. ಯಾವುದೇ ಕಾರಣಕ್ಕೂ ಕಂಠಪಾಠ ಮಾಡುತ್ತಿರಲಿಲ್ಲ. ಪಾಠವನ್ನು ಅರ್ಥ ಮಾಡಿಕೊಳ್ಳುತ್ತಿದ್ದೆ. ಶಿಕ್ಷಕರು ಅತ್ಯುತ್ತಮವಾಗಿ ಪಾಠ ಮಾಡುತ್ತಿದ್ದುದರಿಂದ ಯಾವುದೇ ಟ್ಯೂಶನ್ ಪಡೆಯುವ ಅಗತ್ಯ ಬಂದಿಲ್ಲ ಎಂದರು.
ತಂದೆ ಅಶೋಕ್ ಹಾಗೂ ತಾಯಿ ಸುಮಾ ಮಾತನಾಡಿ, ದೀಪಶ್ರೀಗೆ ಪ್ರಥಮ ರ್‍ಯಾಂಕ್ ಬಂದಿರುವುದು ಖುಷಿ ನೀಡಿದೆ. ಆಕೆಗೆ ಸಿಎ ಆಗಬೇಕೆಂಬ ಆಸೆ, ಅದಕ್ಕೆ ನಾವೂ ಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದರು.
ದೀಪಶ್ರೀ ಕಲಿಕೆಯಲ್ಲಿ ಮಾತ್ರವಲ್ಲ ನಡತೆಯಲ್ಲೂ ಅತ್ಯುತ್ತಮ ವಿದ್ಯಾರ್ಥಿನಿ. ಪರಿಶ್ರಮಿ. ರಾಜ್ಯಕ್ಕೆ ಟಾಪರ್ ಆಗಿರುವುದು ಹೆಮ್ಮೆ ತಂದಿದೆ ಎಂದು ಕೆನರಾ ಪಿಯು ಕಾಲೇಜಿನ ಪ್ರಾಂಶುಪಾಲೆ ಲತಾ ಮಹೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.
ಸೈನ್ಸ್ ಟಾಪರ್ ಅಮೂಲ್ಯಗೆ ಎಂಜಿನಿಯರ್ ಆಗುವಾಸೆ
ಮಂಗಳೂರು: ವಿಜ್ಞಾನ ವಿಭಾಗದ ಟಾಪರ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಅವರ ತಂದೆ- ತಾಯಿ ಇಬ್ಬರೂ ವೈದ್ಯರು. ಅಮೂಲ್ಯಗೆ ಮಾತ್ರ ಎಂಜಿನಿಯರ್ ಆಗುವಾಸೆ.ಪಿಸಿಎಂಸಿ ಅಧ್ಯಯನ ಮಾಡಿದ್ದು, ಮುಂದೆ ಎಂಜಿನಿಯರ್ ಆಗುವಾಸೆ. ರ್‍ಯಾಂಕ್ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಕಾಲೇಜಿನ ಉಪನ್ಯಾಸಕರೂ ಇದನ್ನೇ ಹೇಳಿದ್ದರು. ಅದೀಗ ಸಾಕಾರಗೊಂಡಿದೆ ಎಂದು ಅಮೂಲ್ಯ ಹರ್ಷ ವ್ಯಕ್ತಪಡಿಸಿದರು.
ಅಮೂಲ್ಯ ಕಾಮತ್ ಅವರ ತಂದೆ ಡಾ. ದಿನೇಶ್ ಕಾಮತ್ ವೆನ್‌ಲಾಕ್ ಆಸ್ಪತ್ರೆಯಲ್ಲಿ ಡರ್ಮಟಾಲಜಿಸ್ಟ್ ಆಗಿದ್ದರೆ, ತಾಯಿ ಡಾ. ಅನುರಾಧ ಕಾಮತ್ ಬಿಸಿರೋಡ್‌ನಲ್ಲಿ ಖಾಸಗಿ ಕ್ಲಿನಿಕ್ ಹೊಂದಿದ್ದಾರೆ. ಮೂಲತಃ ಬಂಟ್ವಾಳದವರಾದ ಡಾ. ದಿನೇಶ್ ಕಾಮತ್ ಅವರ ಹಿರಿಯ ಪುತ್ರಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದು, ಅದೇ ಹಾದಿಯಲ್ಲಿ ಅಮೂಲ್ಯ ಉನ್ನತ ಶಿಕ್ಷಣಕ್ಕೆ ಮುಂದಾಗಿದ್ದಾರೆ.
ಕಾಲೇಜಿನಲ್ಲಿ ಉಪನ್ಯಾಸಕರು, ಮನೆಯಲ್ಲಿ ತಂದೆ- ತಾಯಿಯ ನಿರಂತರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುವ ಅಮೂಲ್ಯ, ಭರತನಾಟ್ಯದಲ್ಲಿ ಸೀನಿಯರ್ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ತರಬೇತಿ ಪಡೆದಿದ್ದಾರೆ.
ಪುತ್ರಿಯ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಕಾಮತ್, ಅಮೂಲ್ಯ ರ್‍ಯಾಂಕ್ ಪಡೆಯುವ ನಿರೀಕ್ಷೆ ಇದ್ದೇ ಇತ್ತು. ಅವಳಿಗೆ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇರುವುದರಿಂದ ಅದಕ್ಕೆ ಪ್ರೋತ್ಸಾಹ ನೀಡಿದ್ದೇವೆ. ಸ್ವಕಲಿಕೆಯ ಜತೆಗೆ ಆಕೆಯ ಸಾಧನೆಯಲ್ಲಿ ಉಪನ್ಯಾಸಕರ ಪಾತ್ರ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದರು.
10 ವರ್ಷಗಳಲ್ಲಿ ದ.ಕ. ಫಲಿತಾಂಶ2016-17ರಲ್ಲಿ ಶೇ.89.922017-18ರಲ್ಲಿ ಶೇ. 91.492018-19ರಲ್ಲಿ ಶೇ.90.912019- 20ರಲ್ಲಿ ಶೇ.90.712020-21ರಲ್ಲಿ ಶೇ.100 2021-22ರಲ್ಲಿ ಶೇ.88.022022-23ರಲ್ಲಿ ಶೇ.95.332023-24ರಲ್ಲಿ ಶೇ.97.372024-25ರಲ್ಲಿ ಶೇ. 93.57