ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಸಮೀಪದ ಬೇಟೋಳಿ ಗ್ರಾಮದ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು.ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಹಾಗೂ ಮಹಾ ಚಂಡಿಕಾ ಹೋಮವನ್ನು ನೆರವೇರಿಸಲಾಯಿತು. ದೇವಸ್ಥಾನದಲ್ಲಿ ಹಬ್ಬದ ಹಿಂದಿನ ದಿವಸವೇ ಸಂಜೆ ಅರ್ಚಕರು ವಿಶೇಷ ಪ್ರಾರ್ಥನೆಯೊಂದಿಗೆ ಪಾರಾಯಣ ವನ್ನು ನಡೆಸಿದರು. ಮಹೋತ್ಸವದ ದಿವಸ ಬೆಳಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮೊದಲಿಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ನಾಗ ಹಾಗೂ ಶ್ರೀ ವನದುರ್ಗೆ ದೇವರಿಗೆ ವಿಶೇಷ ಪೂಜೆಯನ್ನು ಅರ್ಚಕರು ಸಲ್ಲಿಸಿದರು. ತದನಂತರ ಮಹಾ ಗಣಪತಿ ಹೋಮವನ್ನು ನೆರವೇರಿಸಲಾಯಿತು. ಹೂವಿನ ಅಲಂಕೃತ ಮಂಟಪದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯ ಫೋಟೋವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನೆರವೇರಿಸಲಾಯಿತು. ಅದರೊಟ್ಟಿಗೆ ಮಹಾ ಚಂಡಿಕಾ ಹೋಮದ ಆಚರಣೆಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಅರ್ಚಕರು ಸತ್ಯನಾರಾಯಣ ಸ್ವಾಮಿಗೆ ಸಂಕಲ್ಪ ಪೂಜೆ, ಅಲಂಕಾರ ಪೂಜೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆಯನ್ನು ನಡೆಸಿದರು. ಮಹಾ ಚಂಡಿಕಾ ಹೋಮವನ್ನು ಸಂಕಲ್ಪ, ಪ್ರಾರ್ಥನೆ, ಪಾರಾಯಣ, ಶ್ರೀ ದೇವಿ ಶ್ಲೋಕ ಪಠಣ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಅಭಿಷೇಕ ಮೊದಲಾದ ಸೇವೆಗಳಿಂದ ನೆರವೇರಿಸಲಾಯಿತು. ದಕ್ಷಿಣ ಕನ್ನಡದ ಭರತನಾಟ್ಯ ಕಲಾವಿದೆ ಸುಷ್ಮಾ ಎಸ್ ನಾಯಕ್ ಅವರಿಂದ ಅಷ್ಟಾವಧನ ಸೇವೆಯ ನೃತ್ಯವು ನೆರವೇರಿತು. ಶ್ರೀ ವಿನಾಯಕ ಮಹಿಳಾ ಭಜನಾ ಮಂಡಳಿಯ ವತಿಯಿಂದ ಭಜನೆ, ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ವೈದಿಕ ಶಿಬಿರದ ವಟುಗಳಿಂದ ಶ್ಲೋಕ ಪಠಣವು ನಡೆಯಿತು. ಶ್ರೀ ಸತ್ಯನಾರಾಯಣ ಸ್ವಾಮಿಗೆ ಮೊದಲಿಗೆ ಮಹಾ ಮಂಗಳಾರತಿ ಸೇವೆಯನ್ನು ನೆರವೇರಿಸಲಾಯಿತು. ತದನಂತರ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯನ್ನು ಅರ್ಚಕರು ನೆರವೇರಿಸಿದರು. ಬಳಿಕ ಮಹಾ ಚಂಡಿಕಾ ಹೋಮದ ಪೂರ್ಣಾಹುತಿ, ಮಹಾ ಮಂಗಳಾರತಿ ಸೇವೆಯು ಜರುಗಿತು. ತದನಂತರ ಬ್ರಹ್ಮಾರ್ಪಣ ಹಾಗೂ ಪ್ರಸಾದ ವಿತರಣೆಯು ಜರುಗಿತು. ಶ್ರೀ ಸತ್ಯನಾರಾಯಣ ಪೂಜೆಯನ್ನು ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ನೆರವೇರಿಸಿದರು. ಮಹಾ ಚಂಡಿಕಾ ಹೋಮವನ್ನು ದಕ್ಷಿಣ ಕನ್ನಡದ ಪುತ್ತೂರುವಿನ ಅರ್ಚಕರಾದ ಪ್ರವೀಣ್ ಭಟ್ ಹಾಗೂ ತಂಡದವರು ನೆರವೇರಿಸಿದರು. ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಸೇವೆಯನ್ನು ಏರ್ಪಡಿಸಲಾಗಿತ್ತು. ಗ್ರಾಮದ ಹಾಗೂ ಸಮೀಪದ ಗ್ರಾಮಗಳ ಹಾಗೂ ವಿರಾಜಪೇಟೆ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್ ಬಿ. ಪಿ., ಉಪಾಧ್ಯಕ್ಷರಾದ ನಂದ ಬಿ. ಜಿ., ಶೈಲೇಶ್ ಕಾಮತ್, ಕಾರ್ಯದರ್ಶಿ ಬಿ. ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ದೇವಸ್ಥಾನವನ್ನು ವಿದ್ಯುತ್ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು.