ಬೆಂಗಳೂರು : ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ 64ನೇ ವರ್ಷದ ಹುಟ್ಟುಹಬ್ಬವನ್ನು ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನದಾನ, ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಶುಕ್ರವಾರ ಮುಂಜಾನೆಯೇ ಸಚಿವರಾದ ಶರಣ್‌ಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ನೂರಾರು ಮಂದಿ ಗಣ್ಯರು ಸದಾಶಿವನಗರದ ನಿವಾಸಕ್ಕೆ ಬಂದು ಶಿವಕುಮಾರ್ ಅವರಿಗೆ ಶುಭಾಶಯ ತಿಳಿಸಿದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ಗೌಡ ಹಾಗೂ ಬೆಂಬಲಿಗರು ವ್ಯವಸ್ಥೆ ಮಾಡಿದ್ದ ಬೃಹತ್ ಕೇಕ್ ಕತ್ತರಿಸಿ ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಇದೇ ವೇಳೆ ವೇದ ವಿದ್ವಾಂಸರು ಹಾಗೂ ಋತ್ವಿಕರ ತಂಡ ಮನ್ಯುಸೂಕ್ತ ಮಂತ್ರಗಳ ಪಠಣ, ವೇದಘೋಷಗಳೊಂದಿಗೆ ಶಿವಕುಮಾರ್ ಅವರಿಗೆ ಆಯುರಾರೋಗ್ಯ, ಆಯಸ್ಸು ಪ್ರಾಪ್ತಿಯಾಗಲೆಂದು ಹರಿಸಿದರು.
ಮುರುಗನ್ ದೇವಾಲಯದಲ್ಲಿ ವಿಶೇಷ ಪೂಜೆ:
ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ತಮಿಳುನಾಡಿನ ತಿರುಚೆಂದೂರಿನ ಮುರುಗನ್ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾದ ರ್ ಸೀಮಂತ್ ಕುಮಾರ್ ಸಿಂಗ್, ಹಿರಿಯ ಪೊಲೀಸ್ ಅಧಿಕಾರಿಗಳಾದ ವಂಶಿ ಕೃಷ್ಣ, ಕಾರ್ತಿಕ್ ರೆಡ್ಡಿ, ರಮೇಶ್ ಬಾನೋತ್, ಸೈದುಲ್ಲಾ ಅದಾವತ್ ಅವರ ತಂಡ ಶಿವಕುಮಾರ್ ಅವರಿಗೆ ಶುಭಾಶಯ ಕೋರಿತು.
ಎಲ್ಲೆಡೆ ಫ್ಲೆಕ್ಸ್:
ಡಿಕೆಶಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡಿದ್ದರೆ, ಕೆಲವರು ಪತ್ರಿಕೆ ಜಾಹಿರಾತು ಹಾಗೂ ಡಿಜಿಟಲ್ ಬೋರ್ಡ್‌ಗಳ ಮೂಲಕ ಶುಭ ಕೋರಿದರು. ರಾಜ್ಯದ ವಿವಿಧ ಕಡೆಯೂ ಫ್ಲೆಕ್ಸ್‌ಗಳ ಅಬ್ಬರ ಜೋರಾಗಿತ್ತು. ಜತೆಗೆ ಕೆಲವು ಕಡೆ ಅನ್ನದಾನ, ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದರು.
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ 8,125 ಚದರಡಿ ಜಾಗದಲ್ಲಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಿ ಅಭಿಮಾನ ಮೆರೆದರು.
ಸಂಭ್ರಮಾಚರಣೆ ಬೇಡ ಎಂದಿದ್ದೆ- ಡಿಕೆ:
ಹುಟ್ಟುಹಬ್ಬದ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾನು ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದಿದ್ದೆ. ಕಳೆದ ರಾತ್ರಿ ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಹಾಗೂ ಸಚಿವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಕಾಯುತ್ತಿದ್ದರು. ಅವರ ಪ್ರೀತಿ ವಿಶ್ವಾಸ, ಆಶೀರ್ವಾದ ಬೇಡ ಎನ್ನಲು ಆಗುವುದಿಲ್ಲ ಎಂದರು.ಯೆಜ್ಡಿ ರೋಡ್‌ಸ್ಟಾರ್‌ಬೈಕ್ ಉಡುಗೊರೆ:
ತಮ್ಮ ಕಾಲೇಜು ದಿನಗಳಲ್ಲಿ ಯೆಜ್ಡಿ ಬೈಕ್ ಬಳಸುತ್ತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಯೆಜ್ಡಿ ಡೀಲರ್ ಸಫೀನಾ ಮೋಟಾರ್ಸ್ ವತಿಯಿಂದ ಹೊಸ ಯೆಜ್ಡಿ ರೋಡ್ ಸ್ಟಾರ್ ಬೈಕ್ ಉಡುಗೊರೆಯಾಗಿ ನೀಡಿತು.
ಬೈಕನ್ನು ಶಿವಕುಮಾರ್ ಅವರ ಮಾಲೀಕತ್ವದ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಹೆಸರಿಗೆ ನೀಡಿದ್ದು, ಹೊಸ ಬೈಕ್ ಮೇಲೆ ಕುಳಿತು ಶಿವಕುಮಾರ್ ಖುಷಿಪಟ್ಟರು ಎಂದು ತಿಳಿದು ಬಂದಿದೆ.