ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 891 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. 92 ಟ್ರಾಂಜಿಟ್ ಹಾಗೂ 57 ಸಂಚಾರಿ (ಮೊಬೈಲ್) ತಂಡ ರಚಿಸಲಾಗಿದೆ.
ಧಾರವಾಡ:
ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದಡಿ ಡಿ. 21ರಿಂದ 24ರ ವರೆಗೆ ಐದು ವರ್ಷದೊಳಗಿನ ಜಿಲ್ಲೆಯ 2,07,837 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾ ಭವನದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಯಶಸ್ವಿ ಕಾರ್ಯಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 891 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. 92 ಟ್ರಾಂಜಿಟ್ ಹಾಗೂ 57 ಸಂಚಾರಿ (ಮೊಬೈಲ್) ತಂಡ ರಚಿಸಲಾಗಿದೆ. ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಒಟ್ಟು 3,829 ವ್ಯಾಕ್ಸಿನೆಟರ್ಸ್, 241 ಮೇಲ್ವಿಚಾರಕರಿದ್ದು ಜಿಲ್ಲೆಯ ಒಟ್ಟು 28,540 ಮನೆಗಳನ್ನು ಲಸಿಕಾ ಅಭಿಯಾನದಡಿ ಸಂದರ್ಶಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಡಿ. 21ರಂದು ಗೊತ್ತುಪಡಿಸಿರುವ ಲಸಿಕಾ (ಬೂತ್) ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5ರ ವರೆಗ ಐದು ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುವುದು. ಡಿ. 22ರಿಂದ 23ರ ವರೆಗೆ ಗ್ರಾಮೀಣ ಪ್ರದೇಶ ಹಾಗೂ ಡಿ. 22ರಿಂದ 24ರ ವರೆಗೆ ನಗರ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ಮೂಲಕ ಆರೋಗ್ಯ ಕಾರ್ಯಕರ್ತರು ಪೋಲಿಯೋ ಲಸಿಕೆ ನೀಡಲಿದ್ದಾರೆ ಎಂದ ಅವರು, ಎಲ್ಲ ಶಾಲೆಗಳು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಬಗ್ಗೆ ಪೋಲಿಯೋ ದಿನದ ಮುನ್ನಾ ದಿನವಾದ ಡಿ. 20ರಂದು ಜಾಥಾ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಡಿ. 21ರ ಭಾನುವಾರ ಬೆಳಗ್ಗೆ 8ಕ್ಕೆ ಲಸಿಕಾ ಕಾರ್ಯಕ್ರಮ ಕೈಗೊಳ್ಳಲು ಶಾಲಾ ಕೊಠಡಿ ತೆರೆದಿಡುವುದು, ಪೋಲಿಯೋ ಲಸಿಕೆ ನೀಡಿಕೆಗಾಗಿ ಸಜ್ಜುಗೊಳಿಸುವುದು ಮಾಡಬೇಕೆಂದು ಸೂಚಿಸಿದರು.
ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಪ್ಯಾಕ್ ತಯಾರಿಸಲು ನಿರಂತರ ವಿದ್ಯುಚ್ಛಕ್ತಿಯ ಅವಶ್ಯಕತೆ ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ದಿನಾಂಕದ ಹಿಂದಿನ ಒಂದು ವಾರದಿಂದ ಮುಂದಿನ ಮೂರು ದಿನಗಳ ವರೆಗೆ ವಿದ್ಯುಚ್ಛಕ್ತಿ ನಿರಂತರವಾಗಿ ಸರಬರಾಜು ಮಾಡುವಂತೆ ಕ್ರಮವಹಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.ಜಿಪಂ ಸಿಇಒ ಭುವನೇಶ ಪಾಟೀಲ, ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಡಾ. ಸುಜಾತ ವಿ. ಹಸವೀಮಠ ಇದ್ದರು.