ಜಿಲ್ಲೆಯಾದ್ಯಂತ ಜೂ.28 ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಇದರ ಯಶಸ್ಸಿಗೆ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕೋರಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಾದ್ಯಂತ ಜೂ.28 ರಿಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಇದರ ಯಶಸ್ಸಿಗೆ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕೋರಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಲ್ಸ್ ಪೋಲಿಯೋ ಲಸಿಕೆಯು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜೂ.28 ರಿಂದ ಜು.1ರ ವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಅಗತ್ಯ ಸಿಬ್ಬಂದಿಗಳ ನಿಯೋಜನೆ, ವಾಹನ ನಿಯೋಜನೆ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪೊಲಿಯೋ ಹನಿ ನೀಡುವ ಕಾರ್ಯಕ್ರಮ ಯಶಸ್ಸುಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ 5 ವರ್ಷದವರೆಗಿನ ಒಟ್ಟು 32,702 ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ 3,275, ಗ್ರಾಮೀಣ ಭಾಗದಲ್ಲಿ 29,427 ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,65,338 ಜನಸಂಖ್ಯೆ ಇದ್ದು, ನಗರ ವ್ಯಾಪ್ತಿಯಲ್ಲಿ 55,179, ಗ್ರಾಮೀಣ ಭಾಗದಲ್ಲಿ 5,10,159 ಜನ ಸಂಖ್ಯೆ ಇದೆ. ಇವರಲ್ಲಿ ವಲಸಿಗ ಮಕ್ಕಳ ಸಂಖ್ಯೆ 4,112 ಮತ್ತು ಸ್ಥಿರವಾಸಿತ ವಲಸೆ ಜನಸಂಖ್ಯೆಯು 15,788 ಸೇರಿ ಒಟ್ಟು 19,900 ಇರುತ್ತದೆ ಎಂದು ಅವರು ಮಾಹಿತಿ ನೀಡಿದರು. ಎಲ್ಲಾ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜೂ.26 ರಂದು ಜಾಥಾ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು, ಜೂ.28 ರಂದು ಬೆಳಗ್ಗೆ 8 ರಿಂದ ಬೂತ್ ಮಟ್ಟದಲ್ಲಿ ಪೊಲಿಯೊ ಹನಿ ನೀಡಲಾಗುತ್ತದೆ ಎಂದು ಹೇಳಿದರು.973 ತಂಡ ರಚನೆ:ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಸ್ಥಿರವಾಸಿತ ವಲಸೆ ಮಕ್ಕಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂರು ದಿನಗಳ ಕಾಲ ನಗರ, ಪಟ್ಟಣ ಪ್ರದೇಶ ಭೇಟಿ ನೀಡಿ ಪೊಲಿಯೊ ಹನಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 1,36,214 ಮನೆಗಳಿದ್ದು, ಈ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿ ಒಟ್ಟು 470 ಬೂತ್‌ಗಳನ್ನು ಗುರುತಿಸಲಾಗಿದೆ. 32 ಸಂಚಾರಿ ತಂಡ, 1 ಮೊಬೈಲ್ ಸಂಚಾರಿ ತಂಡ ರಚಿಸಲಾಗಿದೆ. ಒಟ್ಟು 1946 ಲಸಿಕೆದಾರರನ್ನು ಗುರುತಿಸಲಾಗಿದ್ದು, ಮನೆ ಮನೆ ಭೇಟಿ ನೀಡಲು ಒಟ್ಟು 973 ತಂಡಗಳನ್ನು ರಚಿಸಲಾಗಿದೆ. ಒಟ್ಟು 85 ಮೇಲ್ವಿಚಾರಕರನ್ನು ಗುರುತಿಸಲಾಗಿದೆ. ಇವರುಗಳಿಗೆ ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದಿಂದ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿವರಿಸಿದರು. ಅಗತ್ಯ ಸಹಕಾರ:
ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಮೂಲಕ ಸ್ಥಳೀಯ ನಗರ, ಪಟ್ಟಣ ವ್ಯಾಪ್ತಿಯಲ್ಲಿ ಪಲ್ಸ್ ಪೊಲಿಯೊ ಲಸಿಕೆ ಪಡೆಯುವಂತಾಗಲು ಜನ ಜಾಗೃತಿ ಮೂಡಿಸುವುದು, ತಮ್ಮ ವ್ಯಾಪ್ತಿಯಲ್ಲಿ ಬ್ಯಾನರ್‌ಗಳನ್ನು ಬರೆಸಿ ಹಾಗೂ ಬಿತ್ತಿ ಪತ್ರಗಳನ್ನು ಮುದ್ರಿಸಿ ಪ್ರದರ್ಶಿಸುವುದು, ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ ಅಗತ್ಯ ವಾಹನಗಳ ನಿಯೋಜನೆ ಮಾಡುವುದು, ಬಸ್ ನಿಲ್ದಾಣಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪಲ್ಸ್ ಪೊಲಿಯೊ ಲಸಿಕೆ ಪಡೆಯಲು ಅರಿವು ಮೂಡಿಸುವುದು, ಕಾರ್ಮಿಕ ಇಲಾಖೆ ಮೂಲಕ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಪಡೆಯುವಂತೆ ಮಾಹಿತಿ ನೀಡುವುದು. ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈಜೋಡಿಸುವುದು, ವಿವಿಧ ಸಂಘ, ಸಂಸ್ಥೆಗಳು ಪಲ್ಸ್ ಪೊಲಿಯೊ ಯಶಸ್ಸಿಗೆ ಕೈಜೋಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಅವರು ಕೋರಿದರು.