ಪುಲ್ವಾಮಾ ದಾಳಿ: ಹುತಾತ್ಮ ವೀರಯೋಧ ಗುರು ಸಮಾಧಿಗೆ ಪೂಜೆ

| Published : Feb 15 2024, 01:30 AM IST

ಸಾರಾಂಶ

ಮದ್ದೂರು ತಾಲೂಕಿನಲ್ಲಿ 5 ಎಕರೆ ಜಾಗವನ್ನು ಸೂಕ್ತ ಸ್ಥಳದಲ್ಲಿ ಗುರುತಿಸಿ ಹುತಾತ್ಮರಾದ ಯೋಧರ ಸ್ಮಾರಕಗಳನ್ನು ನಿರ್ಮಾಣ ಮಾಡಬೇಕೆಂಬುವುದು ನನ್ನ ಗುರಿಯಾಗಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ.

ಕನ್ನಡಪ್ರಭ ವಾರ್ತೆ ಭಾರತೀನಗರ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲೂಕಿನ ಗುಡಿಗೆರೆ ವೀರಯೋಧ ಎಚ್.ಗುರು ಸಮಾಧಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಗುರು ಕುಟುಂಬಸ್ಥರು, ದೇಶಾಭಿಮಾನಿಗಳು ಪೂಜೆ ಸಲ್ಲಿಸಿದರು.

ಮೆಳ್ಳಹಳ್ಳಿ ಸಮೀಪವಿರುವ ಸ್ಮಾರಕರದ ಬಳಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಹಾಗೂ ಗುರು ಕುಟುಂಬದ ಸದಸ್ಯರು ವೀರಯೋಧನ 5 ನೇ ವರ್ಷದ ಪುಣ್ಯಸ್ಮರಣೆ ಮಾಡಿದರು.

ನಂತರ ಡಿ.ಸಿ.ತಮ್ಮಣ್ಣ ಮಾತನಾಡಿ, ದೇಶಕ್ಕಾಗಿ ಪ್ರಾಣಕೊಟ್ಟ ಹುತಾತ್ಮ ಗುರು ಸಮಾಧಿ ಅಭಿವೃದ್ದಿ ಪಡಿಸುವುದರ ಮೂಲಕ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅವರ ಪುತ್ಥಳಿಗೆ ಇಂದು ದೇಶಪ್ರೇಮಿಗಳು ಬಂದು ಪೂಜೆ ಸಲ್ಲಿಸುತ್ತಿದ್ದಾರೆ ಎಂದರು.

ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯದ ವೇಳೆ ಗುರು ಸೇರಿದಂತೆ ವೀರ ಮರಣವನ್ನಪ್ಪಿದ ಎಲ್ಲ ಯೋಧರ ಋಣ ಪ್ರತಿಯೊಬ್ಬ ಭಾರತೀಯರ ಮೇಲಿದೆ. ಯೋಧರಿಗೆ ಗೌರವ ಕೊಡುವುದನ್ನು ಯಾವ ಭಾರತೀಯ ಪ್ರಜೆಗಳೂ ಮರೆಯಬಾರದು ಎಂದರು.

ತಾಲೂಕಿನಲ್ಲಿ 5 ಎಕರೆ ಜಾಗವನ್ನು ಸೂಕ್ತ ಸ್ಥಳದಲ್ಲಿ ಗುರುತಿಸಿ ಹುತಾತ್ಮರಾದ ಯೋಧರ ಸ್ಮಾರಕಗಳನ್ನು ನಿರ್ಮಾಣ ಮಾಡಬೇಕೆಂಬುವುದು ನನ್ನ ಗುರಿಯಾಗಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಗುರು ಅವರ ತಾಯಿ ಚಿಕ್ಕೋಳಮ್ಮ ಮಾತನಾಡಿ, ನನ್ನ ಮಗ ದೇಶಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂಬ ಹೆಮ್ಮೆ ಇದೆ. ಆದರೂ ಆ ಕರಾಳ ದಿನದ ನೆನಪು ಇನ್ನೂ ಮಾಸಿಲ್ಲ ಎಂದು ನೋವಿನಿಂದ ಹೇಳಿದರು.

ಈ ವೇಳೆ ವೀರಯೋಧ ಗುರು ಪುಣ್ಯಸ್ಮರಣೆ ಅಂಗವಾಗಿ ಸಮಾಧಿ ಬಳಿ ಅನ್ನಸಂತರ್ಪಣೆ ನಡೆಯಿತು. ಗುರು ತಂದೆ ಹೊನ್ನಯ್ಯ, ಸಹೋದರ ಮಧು, ಆನಂದ, ಪತ್ನಿ ಕಲಾವತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗುರುದೇವರಹಳ್ಳಿ ಅರವಿಂದ್, ಕೆ.ಟಿ.ಸುರೇಶ್, ಕರಡಕೆರೆ ಯೋಗೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.