ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಹಿರೇಹಳ್ಳದಲ್ಲಿ ನಡೆಯುತ್ತಿರುವ ಮರಳು ಮಾಫಿಯಾದಿಂದ ಕೇವಲ ಹಿರೇಹಳ್ಳ ನಾಶವಾಗುತ್ತಿಲ್ಲ. ಹಳ್ಳದಂಚಿನ ರೈತರ ಬದುಕಿಗೂ ಸಂಚಕಾರ ಬಂದಿದೆ. ಹಳ್ಳದಲ್ಲಿನ ರೈತರ ಪಂಪಸೆಟ್ ಹಾಗೂ ದಡಕ್ಕೆ ಹೊಂದಿಕೊಂಡಿರುವ ಭೂಮಿಯೂ ಬಲಿಯಾಗುತ್ತಿದೆ.
ಹಿರೇಹಳ್ಳದಲ್ಲಿ ಮರಳು ದಂಧೆ ಹತ್ತಾರು ವರ್ಷಗಳಿಂದ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮತ್ತು ಆಡಳಿತ ವಿಫಲವಾಗಿರುವುದರಿಂದ ಹಿರೇಹಳ್ಳ ಬಹುತೇಕ ಬರಿದಾಗಿದೆ. ಇದು ಸಾಲದು ಎಂಬಂತೆ ಹಿರೇಹಳ್ಳದ ಎರಡು ದಡದಲ್ಲಿಯೂ ರೈತರ ಭೂಮಿ ಅಗೆದು ಮರಳು ಹುಡುಕಿಕೊಂಡು ಗುಂಡಿ ತೋಡುತ್ತಿದ್ದಾರೆ. ಇದರಿಂದ ಸಮತಟ್ಟಾದ ಭೂಮಿ ಕಂದಕಗಳಿಂದ ಕೂಡಿ ಕೃಷಿ ಚಟುವಟಿಕೆ ನಡೆಸುವುದು ಸಹ ದುಸ್ತರವಾಗಿದೆ.ಈಗಾಗಲೇ ಹಳ್ಳದ ಎರಡು ಬದಿ ಬಹುತೇಕ ರೈತರು ಇಂಥ ಸಂಕಷ್ಟದಿಂದ ನಲುಗಿ ಹೋಗಿದ್ದಾರೆ. ಹಿರೇಹಳ್ಳ ವಿಸ್ತಾರ ಆಗಿರುವುದರಿಂದ ಕೃಷಿ ಭೂಮಿಯ ದಡದಲ್ಲೂ ಮರಳು ಹೇರಳವಾಗಿದೆ. ಹೀಗಾಗಿ ಮರಳು ದಂಧೆಕೋರರು ಇದನ್ನು ಯಂತ್ರದ ಮೂಲಕ ಅಗೆದು ದೋಚುತ್ತಿದ್ದಾರೆ. ಹೀಗೆ ಎತ್ತುವಾಗ ಪಂಪ್‌ಗಳು ಬಿದ್ದು ನಾಶವಾಗುತ್ತಿವೆ. ಈ ಕುರಿತು ರೈತರು ಪ್ರಶ್ನಿಸಿದರೆ ಪಂಪ್‌ಸೆಟ್ ದುರಸ್ತಿಗೆ ಖರ್ಚು ನೀಡುತ್ತಿದ್ದಾರೆ. ಕೆಲವರಿಗೆ ದುರಸ್ತಿಗೆ ಹಣ ಸಹ ನೀಡುವುದಿಲ್ಲ. ಮರಳು ತೆಗೆದುಯುವುದನ್ನು ತಡೆಯಲು ರೈತರು ಹೋದರೆ ಅವರ ಮೇಲೆ ಗೂಂಡಾಗಿರಿ ಮಾಡಲಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸಹ ಸ್ವೀಕರಿಸುತ್ತಿಲ್ಲ ಎನ್ನುವ ಆರೋಪವೂ ಇದೆ.
ರಾಜಾರೋಷವಾಗಿ ದಂಧೆ:ಮರಳು ದಂಧೆ ಹಲಗು-ರಾತ್ರಿಯೆನ್ನದೆ ರಾಜಾರೋಷವಾಗಿಯೇ ನಡೆಯುತ್ತಿದೆ. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ. ಅತ್ತ ನೊಂದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಸ್ಪಂದನೆ ದೊರಯದೆ ಇರುವುದರಿಂದ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಅಧಿಕಾರಿಗಳಿಂದ ಹಿಡಿದು ಮೇಲಧಿಕಾರಿಗಳ ವರೆಗೂ ಮಾಹಿತಿ ಇದ್ದರೂ ಮರಳು ಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ.
ಕಡಿವಾಣ ಯಾರು ಹಾಕುತ್ತಾರೆ:?ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮಕೈಗೊಂಡು ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟ ತಡೆದು ಹಳ್ಳ-ಕೊಳ್ಳ ಸಂರಕ್ಷಿಸಬೇಕಿದ್ದ ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮೌನವಹಿಸಿರುವುದು ಏಕೆ. ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸದಂತೆ ಯಾರಾದರೂ ಒತ್ತಡ ಹಾಕಿದ್ದಾರೆ ಎಂದು ಪ್ರಶ್ನಿಸಿರುವ ಹಳ್ಳದಂಚಿನ ಗ್ರಾಮಸ್ಥರು, ಈ ದಂಧೆಗೆ ಕಡಿವಾಣ ಹಾಕುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸೂತ್ರಧಾರಿ ಯಾರಿ?:ಹಿರೇಹಳ್ಳದುದ್ದಕ್ಕೂ ನಡೆಯುತ್ತಿರುವ ಮರಳು ದಂಧೆಗೆ ಸೂತ್ರಧಾರಿ ಯಾರು ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಬೇಕು. ಯಾರ ಕೃಪಾಕಟಾಕ್ಷದಿಂದ ಹಗಲು-ರಾತ್ರಿಯೆನ್ನದೆ ರಾಜಾರೋಷವಾಗಿ ಹಳ್ಳದ ಒಡಲು ಬಗೆಯಲಾಗುತ್ತಿದೆ ಎಂಬುದು ಬಹಿರಂಗವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.