Pumpset cable theft: Farmers worried

-ಧೂಳೆಹೊಳೆಯಲ್ಲಿ ರಾತ್ರಿ ಕೇಬಲ್ ಕದ್ದ ದುಷ್ಕರ್ಮಿಗಳು

---

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ರೈತರು ತುಂಗಾ ಭದ್ರಾ ನದಿಯಿಂದ ಜಮೀನುಗಳಿಗೆ ಪಂಪ್ ಸೆಟ್ ಗಳ ಮೂಲಕ ನೀರು ಸರಬರಾಜು ಮಾಡಿಕೊಂಡು ತೋಟಗಾರಿಕೆ ಬೆಳೆ ತೆಗೆಯುತ್ತಾರೆ. ಭತ್ತದ ನಾಟಿ ಸಂದರ್ಭ ನೀರಿನ ಅವಶ್ಯಕತೆ ಇರುತ್ತದೆ. ಶುಕ್ರವಾರ ತಡರಾತ್ರಿಯಲ್ಲಿ ದುಷ್ಕರ್ಮಿಗಳು 40 ಪಂಪ್ ಸೆಟ್ ಕೇಬಲ್ ತುಂಡರಿಸಿಕೊಂಡು ಹೋಗಿದ್ದಾರೆ. ಶನಿವಾರ ಬೆಳಿಗ್ಗೆ ರೈತರು ಎಂದಿನಂತೆ ಜಮೀನುಗಳಿಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕೇಬಲ್ ಮೇಲಿನ ಕೋಟಿಂಗ್ ತೆಗೆದುಹಾಕಿ ತಂತಿಗಳನ್ನು ಮಾತ್ರ ತೆಗೆದುಕೊಂಡು ಪರಾರಿಯಾಗಿದ್ದಾರೆ.

40 ಪಂಪ್ ಸೆಟ್ ಗಳ ಒಟ್ಟು ₹10 ಲಕ್ಷ ಬೆಲೆ ಬಾಳುವ ತಂತಿ ತೆಗೆದುಕೊಂಡು ಪರಾರಿಯಾದ ಕಳ್ಳರು, ರಾಮೇಶ್ವರ, ಕಲ್ಲೇಶ್ವರ, ಆಂಜನೇಯ ದೇವಸ್ಥಾನದ ಕೇಬಲ್‌ಗಳನ್ನು ಕಳವು ಮಾಡಿದ್ದಾರೆ.

ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆ ಹಚ್ಚಬೇಕು. ಇಂತಹ ಪ್ರಕರಣಗಳು ಹೆಚ್ಚಾದರೆ ರೈತರಿಗೆ ತೊಂದರೆಯಾಗುತ್ತದೆ ಎಂದು ಕೇಬಲ್ ಕಳೆದುಕೊಂಡ ಕೆ. ಜಿ. ಶಿವನಗೌಡ, ಪ್ರಕಾಶ್ ಗೌಡ, ರಾಜು, ಗೊಲ್ಲಹಳ್ಳಿ ನಾಗಯ್ಯ, ಚೆನ್ನಯ್ಯ, ಈಶಣ್ಣ ಹೇಳಿದ್ದಾರೆ.

ಸ್ಥಳಕ್ಕೆ 112 ಪೊಲೀಸ್ ತಂಡ ಆಗಮಿಸಿ ಸ್ಥಳ ಪರಿಶೀಲಿಸಿ, ದುಷ್ಕರ್ಮಿಗಳ ಪತ್ತೆಗಾಗಿ ಕ್ರಮ ವಹಿಸುವುದಾಗಿ ತಿಳಿಸಿದರು.

ರೈತರು ನದಿಯಿಂದ ಒಂದು ಕಿ.ಮೀ ವರೆಗೂ ಪಂಪ್ ಸೆಟ್ ಮೂಲಕ ಜಮೀನುಗಳಿಗೆ ನೀರು ತರುತ್ತಾರೆ. ಸಾವಿರಾರು ರುಪಾಯಿ ಕೇಬಲ್‌ಗೆ ಖರ್ಚು ಮಾಡಿದ್ದಾರೆ. ಈ ರೀತಿ ಆದರೆ ರೈತರಿಗೆ ತೊಂದರೆ ಆಗುತ್ತದೆ. ಕಳವು ಮಾಡಿದ ಕೇಬಲ್ ಖರೀದಿಸದಂತೆ ನಿರ್ಬಂಧ ವಿಧಿಸಬೇಕು ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಖರೀದಿದಾರರಿಗೆ ಪೊಲೀಸ್ ಇಲಾಖೆ ಸೂಚಿಸಿದೆ ಎಂದು ಮುಖಂಡರಾದ ಎಸ್. ನಿಜಲಿಂಗಪ್ಪ ಮತ್ತು ಡಿ ಕೆ ಹಾಲೇಶ್ ಗೌಡ್ರು ಒತ್ತಾಯಿಸಿದರು.

ಫೋಟೊ

ಧೂಳೆಹೊಳೆ ಗ್ರಾಮದಲ್ಲಿ ರಾತ್ರೋರಾತ್ರಿ ದುಷ್ಕರ್ಮಿಗಳು ಪಂಪ್ ಸೆಟ್ ಕೇಬಲ್ ಕಳವು ಮಾಡಿದ್ದರಿಂದ ಆತಂಕಕ್ಕೆ ಒಳಗಾದ ರೈತರು.