ಪುನರೂರು ಪ್ರತಿಷ್ಠಾನ ಆಯೋಜನೆಯಲ್ಲಿ ಪುನರೂರು ಭಾರತಮಾತಾ ಶಾಲೆಯ ಮೈದಾನದ ಪುನರೂರು ಮಂಟಪದಲ್ಲಿ ಜರಗಿದ ಪುನರೂರು ಸಂಭ್ರಮ–2025 ಕಾರ್ಯಕ್ರಮ ಸಂಪನ್ನಗೊಂಡಿತು.
ಸಮಾಜ ಸೇವೆಯಿಂದ ಬದುಕು ಅರ್ಥಪೂರ್ಣ: ಸತ್ಯನಾರಾಯಣ ನೂರಿತ್ತಾಯ
ಮೂಲ್ಕಿ: ಮನೆಯಲ್ಲಿನ ಉತ್ತಮ ಸಂಸ್ಕಾರ, ಸಮಾಜಕ್ಕೆ ನೀಡುವ ಸೇವೆಯಿಂದ ಮಾನವನ ಬದುಕು ಅರ್ಥಪೂರ್ಣವಾಗುತ್ತದೆ. ಸ್ವಾರ್ಥವನ್ನು ಮೀರಿಸಿ ಪರರ ನೋವನ್ನು ಅರಿತು ಸಹಾಯ ಹಸ್ತ ಚಾಚುವುದೇ ನಿಜವಾದ ಸಮಾಜಸೇವೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯ ಹೇಳಿದ್ದಾರೆ.ಪುನರೂರು ಪ್ರತಿಷ್ಠಾನ ಆಯೋಜನೆಯಲ್ಲಿ ಪುನರೂರು ಭಾರತಮಾತಾ ಶಾಲೆಯ ಮೈದಾನದ ಪುನರೂರು ಮಂಟಪದಲ್ಲಿ ಜರಗಿದ ಪುನರೂರು ಸಂಭ್ರಮ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆಗೈದರು. ಪುನರೂರು ಪ್ರತಿಷ್ಠಾನದ ಗೌರವ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಮೂಲ್ಕಿ ತಾಲೂಕಿನ 26 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಸೌರಭ–2025 ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ 425 ವಿದ್ಯಾರ್ಥಿಗಳಿಗೆ ಧನ್ಯತಾ ಪತ್ರಗಳನ್ನು ವಿತರಿಸಲಾಯಿತು.
ಮಂಗಳೂರಿನ ಗಾನ-ನೃತ್ಯ ಅಕಾಡೆಮಿಯ ಕಾರ್ಯದರ್ಶಿ ವಿದ್ವಾನ್ ರಾಧಾಕೃಷ್ಣ ಭಟ್, ಯುಗಪುರುಷ ಕಿನ್ನಿಗೋಳಿಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ. ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿಯ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಪದಾಧಿಕಾರಿಗಳಾದ ಸುರೇಶ್ ರಾವ್ ನಿರಳಿಕೆ, ಗೀತಾ ಶೆಟ್ಟಿ, ಶೋಭಾ ರಾವ್, ದಾಮೋದರ ಶೆಟ್ಟಿ ಕೊಡೆತ್ತೂರು, ಜೀವನ್ ಶೆಟ್ಟಿ ಅಂಗರಗುಡ್ಡೆ, ಶಶಿಕರ ಕೆರೆಕಾಡು ಉಪಸ್ಥಿತರಿದ್ದರು.ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಜನವಿಕಾಸ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು. ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು.ಗುರು ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ಗಾನ ನೃತ್ಯ ಅಕಾಡೆಮಿ, ಮಂಗಳೂರುನವರಿಂದ ನೃತ್ಯ ಸಂಗಮ ಹಾಗೂ ನೃತ್ಯ ರೂಪಕ ಸತ್ಯಮೇವ ಜಯತೇ ಪ್ರದರ್ಶನ ಜರುಗಿತು.