ಸಾರಾಂಶ
ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿ ಸಹಕಾರದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಉಚಿತ ‘ಬಾಲ ವಿಕಾಸ ಶಿಬಿರ -2025 ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಬೇಸಿಗೆ ಶಿಬಿರ ಮಕ್ಕಳಲ್ಲಿ ವೈಯಕ್ತಿಕ ಮತ್ತು ಶೈಕ್ಷಣಿಕ ಬೆಳವಣಿಗೆ ಉತ್ತೇಜಿಸಲು ಪೂರಕವಾಗಿದ್ದು ಆಧುನಿಕತೆಯ ಇಂದಿನ ದಿನಗಳಲ್ಲಿ ವಿವಿಧ ತರಬೇತಿಗಳ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದ್ದಾರೆ.ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿ ಸಹಕಾರದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ 8 ದಿನಗಳ ಕಾಲ ಆಯೋಜಿಸಿದ ಉಚಿತ ‘ಬಾಲ ವಿಕಾಸ ಶಿಬಿರ -2025’ ಉದ್ಘಾಟಿಸಿ ಅವರು ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಉನ್ನತ ಶಿಕ್ಷಣ ಪಡೆದು ಜ್ಞಾನವಂತರಾಗಿದ್ದರೂ ಸಂಸ್ಕಾರದ ಕೊರತೆಯಿಂದ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಕಾರ ಕಲಿಸುವ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ.ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷ ಅಕ್ಷತಾ ಶೆಟ್ಟಿ, ಪದಾಧಿಕಾರಿಗಳಾದ ಗೀತಾ ಶೆಟ್ಟಿ, ಶೋಭಾ ರಾವ್, ಜೀವನ್ ಶೆಟ್ಟಿ ಅಂಗರಗುಡ್ಡೆ, ಆನಂದ ಮೇಲಾಂಟ, ಶಶಿಕರ ಕೆರೆಕಾಡು ಮತ್ತಿತರರು ಇದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂದಡ್ಕ ನಿರೂಪಿಸಿದರು.