ಸಮಯಕ್ಕೆ ಸರಿಯಾದ ಸೇವೆ: ಬೆಂಗಳೂರು ಏರ್‌ಪೋರ್ಟ್ ವಿಶ್ವ ನಂ.1
KannadaprabhaNewsNetwork | Published : Oct 18 2023, 01:00 AM IST
ಸಮಯಕ್ಕೆ ಸರಿಯಾದ ಸೇವೆ: ಬೆಂಗಳೂರು ಏರ್‌ಪೋರ್ಟ್ ವಿಶ್ವ ನಂ.1
ಸಾರಾಂಶ
ಸಮಯಕ್ಕೆ ಸರಿಯಾಗಿ ಸೇವೆ ನೀಡಿದ ವಿಮಾನ ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
- ಕೆಂಪೇಗೌಡ ಏರ್‌ಪೋರ್ಟಿಂದ ಸಮಯಕ್ಕೆ ಸರಿಯಾಗಿ ಶೇ.89 ವಿಮಾನ ಹಾರಾಟ - ‘ಸಿರಿಯಂ’ ವಿಮಾನಯಾನ ವಿಶ್ಲೇಷಕ ಸಂಸ್ಥೆಯ ಸೆಪ್ಟೆಂಬರ್ ವರದಿ ಶ್ಲಾಘನೆ ಕನ್ನಡಪ್ರಭ ವಾರ್ತೆ ಬೆಂಗಳೂರು ಸಮಯಕ್ಕೆ ಸರಿಯಾಗಿ ಸೇವೆ ನೀಡಿದ ವಿಮಾನ ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ‘ಸಿರಿಯಂ’ ವಿಮಾನಯಾನ ಅನಾಲಿಸಿಸ್ ಸಂಸ್ಥೆ ಬಿಡುಗಡೆ ಮಾಡಿರುವ ‘ದಿ ಆನ್ ಟೈಂ ಪರ್ಫಾರ್ಮೆನ್ಸ್’ ಸೆಪ್ಟೆಂಬರ್ ತಿಂಗಳ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಕೆಐಎನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಶೇ. 88.51ರಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ಹಾರಾಟ ನಡೆಸಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಲಾಗಿದೆ. ಅದೇ ರೀತಿ ಎರಡನೇ ಸ್ಥಾನದಲ್ಲಿ ಅಮೆರಿಕದ ಸಾಲ್ಟ್ ಲೇಕ್ ಸಿಟಿ ವಿಮಾನ ನಿಲ್ದಾಣ, ಮೂರನೇ ಸ್ಥಾನವನ್ನು ಹೈದರಾಬಾದ್‌ನ ರಾಜೀವ್‌ಗಾಂಧಿ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಕೆಐಎ ಜುಲೈನಲ್ಲಿ ಶೇ. 87.51ರಷ್ಟು ಆನ್ ಟೈಂ ಸೇವೆ ನೀಡಿತ್ತು. ಅದೇ ಆಗಸ್ಟ್‌ನಲ್ಲಿ ಆ ಪ್ರಮಾಣ ಶೇ. 89.66ರಷ್ಟಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ಆನ್ ಟೈಂ ಸೇವೆ ನೀಡಿದ ಪ್ರಮಾಣ ಶೇ. 1.15ರಷ್ಟು ಕಡಿಮೆಯಾಗಿದ್ದರೂ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವರದಿ ಪ್ರಕಾರ ನಿಗದಿತ ಸಮಯದ 15 ನಿಮಿಷಗಳಲ್ಲಿ ನಿರ್ಗಮಿಸಿದ ವಿಮಾನಗಳ ಶೇಕಡಾವಾರು ಪ್ರಮಾಣವನ್ನಾಧರಿಸಿ ಆನ್ ಟೈಮ್ ಸೇವೆಯನ್ನು ಅಳೆಯಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಐಎ ಮೂಲಕ ಒಟ್ಟು 35 ವಿಮಾನಯಾನ ಸಂಸ್ಥೆಗಳು ಒಟ್ಟು 88 ಮಾರ್ಗಗಳಲ್ಲಿ ಸೇವೆ ನೀಡಿವೆ. ಅವುಗಳಲ್ಲಿ ಶೇ. 88.51ರಷ್ಟು ವಿಮಾನಗಳ ನಿರ್ಗಮನ ಆನ್ ಟೈಂ ಇದ್ದರೆ, ಆಗಮನದ ಪ್ರಮಾಣ ಶೇ. 79.46ರಷ್ಟಿದೆ. ಒಟ್ಟಾರೆ ಕೆಐಎ ಮೂಲಕ 18,913 ಹಾರಾಟಗಳು ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.