ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಳೆ, ಚಳಿ-ಗಾಳಿ ಎನ್ನದೆ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ದೇವರಿದ್ದಂತೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಒಂದೇ ಒಂದು ದೂರು ಬಾರದಂತೆ ಸ್ವಚ್ಛತೆ ಮಾಡುತ್ತಿರುವ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯವಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.ಬೋಗಾದಿ ಪಟ್ಟಣ ಪಂಚಾಯ್ತಿಯಲ್ಲಿ ಗುರುವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಹತ್ತು ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದು. ಒಂದು ನಗರಸಭೆ,ನಾಲ್ಕು ಪಟ್ಟಣ ಪಂಚಾಯ್ತಿಯನ್ನು ಹೊಂದಿರುವ ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರವಾಗಿದೆ. ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ಮಂತ್ರಿಗಳು,ಮುಖ್ಯಮಂತ್ರಿಗಳ ಮೇಲೆ ಪಟ್ಟುಹಿಡಿದು ಮಾಡಿಸಿದ್ದೇನೆ ಎಂದರು.
ಗ್ರಾಮ ಪಂಚಾಯ್ತಿಯಿಂದ ನಗರಸಭೆ,ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೇಗೇರಿಸಿದ ಬಳಿಕ ಸಿಬ್ಬಂದಿಯನ್ನು ಕಾಯಂ ಮಾಡಲು ನಿರ್ಧರಿಸಲಾಯಿತು. ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರು,ವಾಟರ್ಮನ್ಗಳು ಮತ್ತಿತರ ಸಿಬ್ಬಂದಿಯ ವೇತನ ಹೆಚ್ಚಳವಾಗುವಂತೆ ಮಾಡಲಾಗಿದೆ. ಕೆಲವರನ್ನು ಕಾಯಂ ಮಾಡಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ ಎಂದು ಭರವಸೆ ನೀಡಿದರು.ಪೌರ ಕಾರ್ಮಿಕರು ಸಮಯ ಪಾಲನೆ ಮಾಡುತ್ತಾರೆ. ಮುಂಜಾನೆ ಸರಿಯಾಗಿ ಹಾಜರಾಗಿ ಮಳೆ,ಗಾಳಿ ಎನ್ನದೆ ಕೆಲಸ ಮಾಡುವುದರಿಂದ ಸ್ವಚ್ಛತೆಯಿಂದ ಇರುತ್ತದೆ. ನಾನು ಎಷ್ಟೋ ಬಾರಿ ಮುಂಜಾನೆ ಹೊರಗೆ ಹೋಗುವಾಗ ತಮ್ಮ ಕಾಯಕದಲ್ಲಿ ತೊಡಗಿರುವುದನ್ನು ನೋಡಿದ್ದೇನೆ. ಒಂದರ್ಥದಲ್ಲಿ ಪೌರ ಕಾರ್ಮಿಕರೇ ದೇವರಾಗಿದ್ದಾರೆ ಎಂದು ಹೇಳಿದರು. ಸ್ವಚ್ಛತೆ ಬಗ್ಗೆ ಒಂದೇ ಒಂದು ದೂರು ಬಂದಿಲ್ಲ. ಕಸ ಸಂಗ್ರಹಿಸುವರು ಬಂದಲ್ಲ, ಸ್ವಚ್ಛತೆ ಇಲ್ಲ ಎನ್ನುವ ಮಾತು ಬರದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹವರಿಗೆ ಬೇಕಾದ ನೆರವನ್ನು ಒದಗಿಸಲು ಗಮನಹರಿಸಲಾಗುವುದು ಎಂದರು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರ್ಕಾರಿ ಉದ್ಯೋಗ ದೊರೆಯುವಂತೆ ಮಾಡಬೇಕು. ಪೌರ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಾವು ದೂರವಿಡುವ ಬದಲಿಗೆ ಸಮಾನವಾಗಿ ಕಾಣಬೇಕು. ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಅದೇ ರೀತಿ ಪೌರ ಕಾರ್ಮಿಕರು ಶ್ರಮಜೀವಿಗಳು ಎಂಬುದನ್ನು ನಾವು ಗಮನಿಸಬೇಕು ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಹತ್ತು ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ವಿತರಿಸಲಾಯಿತು. ಮುಖ್ಯಾಧಿಕಾರಿ ಬಸವರಾಜು, ಎಂಜಿನಿಯರ್ ಹರ್ಷ, ಆರೋಗ್ಯಾಧಿಕಾರಿ ಪುನೀತ್, ಮುಖಂಡರಾದ ಚಂದ್ರಶೇಖರ್,ಆನಂದ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್ ಮತ್ತಿತರರು ಹಾಜರಿದ್ದರು.