ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪುಂಡಲೀಕಪ್ಪ ಹುಗ್ಗಿ ಆಯ್ಕೆ

| Published : Jan 29 2024, 01:41 AM IST

ಸಾರಾಂಶ

ಗುಳೇದಗುಡ್ಡ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಮತ್ತು ತಾಲೂಕು ಘಟಕಗಳ ಆಶ್ರಯದಲ್ಲಿ ಗುಳೇದಗುಡ್ಡ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಟಗೇರಿನಲ್ಲಿ ಫೆ.10ರಂದು ನಡೆಯುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದ ಡಾ.ಪುಂಡಲೀಕಪ್ಪ ಹುಗ್ಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು. ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಮತ್ತು ತಾಲೂಕು ಘಟಕಗಳ ಆಶ್ರಯದಲ್ಲಿ ಗುಳೇದಗುಡ್ಡ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಟಗೇರಿನಲ್ಲಿ ಫೆ.10ರಂದು ನಡೆಯುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದ ಡಾ.ಪುಂಡಲೀಕಪ್ಪ ಹುಗ್ಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ.ಪಿ.ಎಂ. ಹುಗ್ಗಿಯವರು ಕನ್ನಡ, ಅರ್ಥಶಾಸ್ತ್ರ ಹಾಗೂ ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಷಡಕ್ಷರಿದೇವ ಒಂದು ಅಧ್ಯಯನ ಎಂಬ ವಿಷಯದ ಮೇಲೆ ಕನ್ನಡ ಹಾಗೂ ವಚನಗಳ ಸಂಬಂಧಗಳ ಪರಿಕಲ್ಪನೆ-ತತ್ವಶಾಸ್ತ್ರೀಯ ವಿಶ್ಲೇಷಣೆ ವಿಷಯ ಕುರಿತು ತತ್ವಶಾಸ್ತ್ರದಲ್ಲಿ ಹೀಗೆ ಎರಡು ವಿಷಯಗಳಲ್ಲಿ ಪಿ.ಎಚ್. ಡಿ ಪದವಿ ಪಡೆದಿದ್ದಾರೆ. ಆಧುನಿಕ ವಚನಗಳು ಎಂಬ ಕೃತಿಯಲ್ಲಿ 40 ಸಾವಿರ ವಚನಗಳನ್ನು ಹುಗ್ಗಿನಾಥ ಎಂಬ ಅಂಕಿತನಮದೊಂದಿಗೆ ಬರೆದಿದ್ದಾರೆ. ಸೈಯವ ಬೀಗತಿ, ಭಾರತ ಸಂವಿಧಾನದ ಒಂದು ನೋಟ, ಕಾನೂನಿನಲ್ಲಿ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸರ್ಕಾರಿ ಇಲಾಖಾ ಅಧಿಕಾರಿಗಳಾಗಿ, ಕಾಲೇಜು ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ವಿದ್ಯಾರತ್ನ, ಕರ್ನಾಟಕ ಸೇವಾ ರತ್ನ, ಬಸವ ರತ್ನ ಮುಂತಾದ ಪ್ರಶಸ್ತಿಗೆ ಭಜನರಾಗಿರುವ ಇವರು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ 11 ಪರೀಕ್ಷೆ ಪಾಸು ಮಾಡಿದ್ದಾರೆ ಎಂದರು.

ತಾಲೂಕು ಕಸಾಪ ಆಧ್ಯಕ್ಷ ಡಾ.ಎಚ್.ಎಸ್. ಘಂಟಿ, ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ. ಜೋಶಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ ಕಾಳನ್ನವರ್, ತಾಲೂಕು ಗೌರವ ಕಾರ್ಯದರ್ಶಿ ಈರಣ್ಣ ಅಲದಿ, ಯಲ್ಲಪ್ಪ ಮನ್ನಿಕಟ್ಟಿ, ತಾಲೂಕು ಕೋಶಾಧ್ಯಕ್ಷ ವಿಠ್ಠಲಸಾ. ಬದಿ, ಸಂಘಟನಾ ಕಾರ್ಯದರ್ಶಿ ಎ.ಎಸ್. ಕಾಡರ, ಮಲ್ಲಿಕಾರ್ಜುನ ಹಾಲಿಗೇರಿ ಮಾಧ್ಯಮ ಕಾರ್ಯದರ್ಶಿ ಸಂಗಮೇಶ ಚಿಕ್ಕಾಡಿ, ಸದಸ್ಯರಾದ ಎ.ಐ. ಅಪಘಾನ, ಪರಶುರಾಮ ಮಾದರ, ಬಿ.ಎಂ. ಸಂಕನೂರ, ಗುಂಡಪ್ಪ ಕೋಟಿ ಇದ್ದರು.