ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

| Published : Jul 30 2025, 12:45 AM IST

ಸಾರಾಂಶ

ಬಾಳೆಹೊನ್ನೂರು ಅರಣ್ಯ ಇಲಾಖೆಯ ವ್ಯಾಪ್ತಿಯ ಬನ್ನೂರು ಮತ್ತು ಅಂಡವಾನೆ ಗ್ರಾಮದಲ್ಲಿ ಐದು ದಿನಗಳ ಅಂತರದಲ್ಲಿ ಇಬ್ಬರ ಬಲಿ ಪಡೆದ ಪುಂಡಾನೆಯನ್ನು ಕಾರ್ಯಾಚರಣೆ ಆರಂಭಿಸಿದ 24 ಗಂಟೆಯೊಳಗೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಬಾಳೆಹೊನ್ನೂರು ಅರಣ್ಯ ಇಲಾಖೆಯ ವ್ಯಾಪ್ತಿಯ ಬನ್ನೂರು ಮತ್ತು ಅಂಡವಾನೆ ಗ್ರಾಮದಲ್ಲಿ ಐದು ದಿನಗಳ ಅಂತರದಲ್ಲಿ ಇಬ್ಬರ ಬಲಿ ಪಡೆದ ಪುಂಡಾನೆಯನ್ನು ಕಾರ್ಯಾಚರಣೆ ಆರಂಭಿಸಿದ 24 ಗಂಟೆಯೊಳಗೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬನ್ನೂರು, ಅಂಡವಾನೆ ಗ್ರಾಮದಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿದ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನಲ್ಲಿ ಎರಡು ದಿನಗಳ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯ ಹೇರಿದ್ದರು.

ಸಾರ್ವಜನಿಕರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುಂಡಾನೆಯ ಸೆರೆ ಹಿಡಿಯಲು ಅಧಿಕಾರಿಗಳಿಗೆ ಆದೇಶ ನೀಡಿಸಿದ್ದರು. ಸೋಮವಾರ ಮಧ್ಯಾಹ್ನವೇ ಬಾಳೆಹೊನ್ನೂರಿಗೆ ಸಕ್ರೇಬೈಲಿನಿಂದ ೪ ಕುಮ್ಕಿ ಆನೆಗಳನ್ನು ತರಲಾಗಿತ್ತು. ಮಂಗಳವಾರ ಬೆಳಿಗ್ಗೆ ಮತ್ತೊಂದು ಆನೆಯನ್ನು ಕರೆಯಿಸಿಕೊಳ್ಳಲಾಗಿತ್ತು.

ಅರಣ್ಯ ಇಲಾಖೆಯ ಸಂಪ್ರದಾಯದಂತೆ ಮಂಗಳವಾರ ಬೆಳಿಗ್ಗೆ ಕುಮ್ಕಿ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆನೆ ಸೆರೆ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಇಬ್ಬರನ್ನು ಬಲಿ ಪಡೆದ ಪುಂಡಾನೆ ಬನ್ನೂರು ಗ್ರಾಮದ ಬಳಿಯಲ್ಲಿ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯೂ ಬಂದಿತ್ತು. ಅಲ್ಲಿಗೆ ಕುಮ್ಕಿ ಆನೆಗಳನ್ನು ಕರೆಯಿಸಿಕೊಂಡ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.

ಮಧ್ಯಾಹ್ನ 12 ಗಂಟೆಯ ವೇಳೆಗೆ ಬನ್ನೂರು ಗ್ರಾಮದ ಕುಂಬ್ರಮನೆ ಎಂಬಲ್ಲಿ ಆನೆಗೆ ಅರವಳಿಕೆ ತಜ್ಞರು ಹಾಗೂ ಶಾರ್ಪ್ ಶೂಟರ್ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಅರವಳಿಕೆ ಚುಚ್ಚುಮದ್ದು ಪುಂಡಾನೆಗೆ ತಗುಲುತ್ತಿದ್ದಂತೆ ಅದು ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ದಾಳಿಗೆ ಯತ್ನಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ರೊಚ್ಚಿಗೆದ್ದ ಪುಂಡಾನೆಯಿಂದ ಹರಸಾಹಸ ಪಟ್ಟು ತಪ್ಪಿಸಿಕೊಂಡು ಸ್ಥಳದಿಂದ ಕಾಲ್ಕಿತ್ತರು.

ಆತ್ಮವಿಶ್ವಾಸ ಕಳೆದುಕೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು, ಶಾರ್ಪ್ ಶೂಟರ್ ಮಧ್ಯಾಹ್ನದ ವೇಳೆಗೆ ಪುನಃ ಕಾರ್ಯಾಚರಣೆ ಆರಂಭಿಸಿದ್ದು, ಅಂಡವಾನೆ ಗ್ರಾಮದ ಬಳಿ ಪುನಃ ಕಂಡುಬಂದ ಪುಂಡಾನೆಗೆ ಎರಡನೇ ಬಾರಿಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಚುಚ್ಚುಮದ್ದು ಬೀಳುತ್ತಿದ್ದ ಪುನಃ ರೊಚ್ಚಿಗೆದ್ದ ಆನೆ ರಭಸವಾಗಿ ಓಡುತ್ತ ಬಿಳುಕೊಪ್ಪ ಗ್ರಾಮದ ಬಸವನಕೋಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಂದು ಸಂಜೆ ವೇಳೆಗೆ ಪ್ರಜ್ಞಾಹೀನವಾಗಿ ಬಿದ್ದಿತು.

ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಕುಮ್ಕಿ ಆನೆಗಳನ್ನು ಕರೆದುಕೊಂಡು ಪುಂಡಾನೆ ಬಿದ್ದ ಸ್ಥಳಕ್ಕೆ ಧಾವಿಸಿ ಹಗ್ಗ ಮತ್ತು ಸರಪಳಿಯ ಮೂಲಕ ಅದನ್ನು ಬಂಧಿಸಿದರು.

ಸಂಜೆ ಐದು ಗಂಟೆಯ ವೇಳೆಗೆ ಪುಂಡಾನೆ ಸೆರೆ ಸಿಕ್ಕರೂ ಸಹ ಅದನ್ನು ಅರಣ್ಯ ಪ್ರದೇಶದಿಂದ ಹೊರ ತರಲು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಬೇಕಾಯಿತು. ಪುಂಡಾನೆಯು ನಾಲ್ಕು ಕುಮ್ಕಿ ಆನೆಗಳಿಗೂ ಬಗ್ಗದೆ ತನ್ನ ಪುಂಡಾಟವನ್ನು ಮೆರೆಸಿತ್ತು.

ಕಾರ್ಯಾಚರಣೆಗೆ ಬಂದ ಆನೆಗಳು

ಪುಂಡಾನೆ ಸೆರೆಗೆ ಸಕ್ರೇಬೈಲು ಆನೆ ಬಿಡಾರದಿಂದ ಸಾಗರ್, ಸೋಮಣ್ಣ, ಬಹದ್ದೂರ್, ಬಾಲಣ್ಣ ಎಂಬ ಗಂಡಾನೆ ಹಾಗೂ ಭಾನುಮತಿ ಎಂಬ ಹೆಣ್ಣಾನೆಯನ್ನು ಕರೆಯಿಸಿಕೊಳ್ಳಲಾಗಿತ್ತು. ಗಂಡಾನೆಗಳು ಪುಂಡಾನೆಯ ಸೆರೆ ಹಾಗೂ ಅದರ ಪುಂಡಾಟವನ್ನು ನಿಗ್ರಹಿಸುವಲ್ಲಿ ಕಾರ್ಯನಿರ್ವಹಿಸಿದರೆ, ಹೆಣ್ಣಾನೆ ಪುಂಡಾಟ ನಡೆಸುವ ಗಂಡಾನೆಯನ್ನು ಬಲೆಗೆ ಬೀಳಿಸುವ ಕಾರ್ಯವನ್ನು ನಡೆಸಲಿದೆ.

ಸೆರೆ ಸಿಕ್ಕ ಆನೆ ಸಕ್ರೇಬೇಲಿಗೆ ಶಿಫ್ಟ್

ಬಿಳುಕೊಪ್ಪ ಗ್ರಾಮದಲ್ಲಿ ಸೆರೆ ಸಿಕ್ಕ ಪುಂಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆಯ ಸಿಸಿಎಫ್ ಯಶ್‌ಪಾಲ್ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾದ ಕಾರ್ಯಾಚರಣೆಯನ್ನು ನಡೆಸಿದ್ದು, ಸಕ್ರೇಬೈಲಿಗೆ ಸ್ಥಳಾಂತರಕ್ಕೆ ಇಲಾಖೆಯಿಂದ ಸೂಚನೆ ದೊರೆತಿದೆ. ಕಾರ್ಯಾಚರಣೆಗೆ ಭದ್ರಾ ಅಭಯಾರಣ್ಯ ವ್ಯಾಪ್ತಿ, ಚಿಕ್ಕಮಗಳೂರು ಹಾಗೂ ಕೊಪ್ಪ ವಿಭಾಗಗಳಿಂದ ಸಿಬ್ಬಂದಿ ಬಳಸಿಕೊಳ್ಳಲಾಗಿದೆ. ಶಿವಮೊಗ್ಗ ಆನೆ ಬಿಡಾರದಿಂದ ಅರವಳಿಕೆ ತಜ್ಞರು, ಕೊಡಗಿನಿಂದ ಶಾರ್ಪ್ ಶೂಟರ್ ಹಾಗೂ ಆನೆ ಟ್ರ್ಯಾಕರ್ ಅನ್ನು ಕಾರ್ಯಕ್ಕೆ ನಿಯೋಜಿಸಿಕೊಳ್ಳಲಾಗಿತ್ತು. ಹಾಲಿ ಸಿಕ್ಕಿರುವ ಪುಂಡಾನೆಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಇದರ ಅಂದಾಜು ವಯಸ್ಸು 10ರಿಂದ 15 ಆಗಿರಬಹುದು ಎಂದು ತಿಳಿಸಿದರು.

ಶಾಸಕ ರಾಜೇಗೌಡ ಹರ್ಷ

ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಪುಂಡಾನೆಯನ್ನು ಕಾರ್ಯಾಚರಣೆ ಆರಂಭಿಸಿದ 24 ಗಂಟೆಯೊಳಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಶಾಸಕ ಟಿ.ಡಿ.ರಾಜೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ಆನೆಗಳನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಮೂಲಕ ಒತ್ತಾಯ ಹೇರಿದ್ದೆ. ಅದಕ್ಕೆ ಅರಣ್ಯ ಸಚಿವರು ಹಾಗೂ ಸರ್ಕಾರ ಸ್ಪಂದಿಸಿತ್ತು. ಈ ಭಾಗದಲ್ಲಿ ಇನ್ನೂ ಒಂದು ಪುಂಡಾನೆ ಇರುವ ಮಾಹಿತಿಯಿದ್ದು ಅದನ್ನು ಸೆರೆ ಹಿಡಿಯಲು ನಾಳೆಯೊಳಗೆ ಆದೇಶ ಮಾಡಿಸಲಾಗುವುದು ಎಂದರು.

ಪುಂಡಾನೆ ವೀಕ್ಷಣೆಗೆ ಜಮಾಯಿಸಿದ ಜನ

ಪುಂಡಾನೆ ಸೆರೆ ಸಿಕ್ಕ ಮಾಹಿತಿ ದೊರೆಯುತ್ತಿದ್ದಂತೆ ಅದರ ವೀಕ್ಷಣೆಗೆ ಬಾಳೆಹೊನ್ನೂರು, ಖಾಂಡ್ಯ, ಕಡಬಗೆರೆ, ಸಂಗಮೇಶ್ವರಪೇಟೆ, ಹುಯಿಗೆರೆ, ಮಾಗುಂಡಿ ಮುಂತಾದ ಕಡೆಗಳಿಂದ ಸಾವಿರಾರು ಸಂಖ್ಯೆಯ ಜನರು ಎಲೆಕಲ್ಲು ಮೀಸಲು ಅರಣ್ಯ ಪ್ರದೇಶ ಬಳಿ ಜಮಾಯಿಸಿದ್ದರು. ಪರಿಣಾಮ ಮುಖ್ಯರಸ್ತೆ ಸಂಚಾರ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಿಂದ ತೊಂದರೆಗೀಡಾಗಿತ್ತು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಎಲೆಕಲ್ಲು-ಅಂಡವಾನೆ ರಸ್ತೆಯ ಮಾರ್ಗವನ್ನು ಪೊಲೀಸರು ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧಿಸಿದ್ದರು. ಮುಂಜಾಗರೂಕ ಕ್ರಮವಾಗಿ ಕೆಎಸ್‌ಆರ್‌ಪಿ ಸಿಬ್ಬಂದಿ ನಿಯೋಜಿಸಲಾಗಿತ್ತು.

ಪುಂಡಾನೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿ ಕ್ಷೇತ್ರದ ಪ್ರವಾಸದಲ್ಲಿದ್ದ ಶಾಸಕ ರಾಜೇಗೌಡ ಪ್ರವಾಸ ಮೊಟಕುಗೊಳಿಸಿ ಸ್ಥಳಕ್ಕೆ ಭೇಟಿ ನೀಡಿದರು.