ಸಾರಾಂಶ
ಬೆಳಗಾವಿ ಜಿಲ್ಲೆಯ ಜನರ ಬಹಳ ದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವರು ಹಸಿರು ನಿಶಾನೆ ನೀಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ ಹರ್ಷ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆಯ ಜನರ ಬಹಳ ದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವರು ಹಸಿರು ನಿಶಾನೆ ನೀಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹರ್ಷ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ನೂತನ ರೈಲು ಸಂಪರ್ಕಕ್ಕಾಗಿ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಪ್ರಸ್ತಾಪಿತ ಮಾರ್ಗದಲ್ಲಿ ಈ ರೈಲು ಪ್ರಾರಂಭಿಸುವಂತೆ ಮನವಿ ಮಾಡಿದ್ದೆ. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಈಗ ಅದು ಈಡೇರಿದೆ ಎಂದು ಹೇಳಿದರು.
ಬೆಳಗಾವಿ-ಪುಣೆ ನಗರಗಳ ನಡುವೆ ವಂದೇ ಭಾರತ್ ನೂತನ ರೈಲು ಸಂಚಾರಕ್ಕೆ ಸೆ.15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ಅಂದು ಸಂಜೆ ರೈಲನ್ನು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲಾಗುವುದು ಎಂದು ಹೇಳಿದರು.ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು ಕೂಡ ಬೆಳಗಾವಿ ನಗರದವರೆಗೂ ವಿಸ್ತರಿಸುವ ಬಗ್ಗೆಯೂ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಿದ್ದೇನೆ. ಈ ಬೇಡಿಕೆಯನ್ನು ಸಹ ಅವರು ಪರಿಗಣಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.