ಭತ್ತದ ಪೈರಿನಲ್ಲಿ ಅರಳಿದ ಪುನೀತ್ ರಾಜಕುಮಾರ

| Published : Oct 14 2023, 01:01 AM IST

ಸಾರಾಂಶ

ಭತ್ತದ ಪೈರಿನಲ್ಲಿ ಅರಳಿದ ಪುನೀತ್ ರಾಜಕುಮಾರ
ಅಪ್ಪು ಎರಡನೇ ಪುಣ್ಯಸ್ಮರಣೆಗೆ ಅಭಿಮಾನಿಯಿಂದ ವಿಶೇಷ ಆರಾಧನೆ ಕನ್ನಡಪ್ರಭ ವಾರ್ತೆ ರಾಯಚೂರು ಅಪ್ಪು ಅವರ ಎರಡನೇ ಪುಣ್ಯಸ್ಮರಣೆ ನಿಮಿತ್ತ ರಾಯಚೂರು ಜಿಲ್ಲೆಯ ಅಭಿಮಾನಿಯೊಬ್ಬರು ವಿಶೇಷ ಆರಾಧನೆಗೆ ಮುಂದಾಗಿದ್ದು, ತಮ್ಮ ಎರಡು ಎಕರೆ ಜಮೀನಲ್ಲಿ ವಿವಿಧ ಭತ್ತದ ತಳಿಗಳನ್ನಾಕಿ ಆ ಪೈರಿನಲ್ಲಿ ಪುನೀತ್ರಾಜ್ಕುಮಾರ ಅವರ ಭಾವಚಿತ್ರ ಅರಳಿಸಿ ತಮ್ಮ ಅಪಾರ ಅಭಿಮಾನವನ್ನು ಬಿಚ್ಚಿಟ್ಟಿದ್ದಾರೆ. ಜಿಲ್ಲೆ ಮಾನ್ವಿ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪಿನಲ್ಲಿ ರೈತ ಸತ್ಯನಾರಾಯಣ ಅವರು ಪುನೀತ್‌ ಮೇಲಿನ ಅಭಿಮಾನವನ್ನು ಈ ರೀತಿಯಾಗಿ ತೋರಿಸಿದ್ದಾರೆ. ಸತ್ಯಾನಾರಾಯಣ ಅವರು ಪುನೀತ್‌ ರಾಜಮಾರ ಅವರ ಭಾವಚಿತ್ರವನ್ನು ಭಿತ್ತರಿಸುವುದಕ್ಕಾಗಿ ತಮ್ಮ 6 ಎಕರೆ ಪೈಕಿ 2 ಎಕರೆ ಜಮೀನಿನಲ್ಲಿ ಗುಜರಾತ್‌ ರಾಜ್ಯದಿಂದ ತಂದ ಗೋಲ್ಡನ್‌ ರೋಸ್‌ ಹಾಗೂ ಕಾಲಾ ಭಟ್ಟಿ ಕಪ್ಪು ಬಣ್ಣದ ಭತ್ತದ ತಳಿ ಜೊತೆಯಲ್ಲಿ ಸೋನಾಮಸೂರಿ ತಳಿಯ 100 ಕೆಜಿ ಭತ್ತದ ಬೀಜ ಬಿತ್ತಿ ಬೆಳೆಯನ್ನು ಬೆಳೆದಿದ್ದು, ಇದಕ್ಕಾಗಿ ಸುಮಾರು 3 ಲಕ್ಷ ರು. ಖರ್ಚು ಮಾಡಿದ್ದಾರೆ. ಚೀನಾ ಮತ್ತು ಜಪಾನ ದೇಶಗಳ ರೈತರು ತಮ್ಮ ಜಮೀನಿನಲ್ಲಿ ರೈಸ್ ಪ್ಯಾಡಿ ಆರ್ಟ್‌ ಹೆಸರಿನಲ್ಲಿ ವಿವಿಧ ಬಣ್ಣದ ಭತ್ತದ ತಳಿಗಳನ್ನು ಬಳಸಿ ಚಿತ್ರವನ್ನು ಬಿಡಿಸುವ ಮಾದರಿಯಲ್ಲಿ ಶ್ರೀನಿವಾಸ ಕ್ಯಾಂಪಿನ ರೈತ ಸತ್ಯನಾರಾಯಣ ಅವರು ತಮ್ಮ ನೆಚ್ಚಿನ ನಟ ಪುನೀತ್‌ ರಾಜಕುಮಾರ ಅವರ ಭಾವಚಿತ್ರವನ್ನು ಬಿಡಿಸದ್ದಾರೆ. ಸಾಮಾನ್ಯವಾಗಿ ಜಮೀನನ್ನು ನೋಡಿದಲ್ಲಿ ಕಪ್ಪು ಹಸಿರು ಬಣ್ಣದ ಭತ್ತದ ಬೆಳೆಯನ್ನು ನೋಡಬಹುದು ಆದರೆ, ದ್ರೋಣ ಕ್ಯಾಮಾರವನ್ನು ಹಾರಿಸಿ ಜಮೀನನ್ನು ನೋಡಿದಲ್ಲಿ ಹಚ್ಚಹಸಿರ ಕ್ಯಾನವಾಸ್‌ನಲ್ಲಿ ಕಪ್ಪು ಬಣ್ಣವನ್ನು ಬಳಸಿ ಪುನೀತ ಭಾವಚಿತ್ರ, ಅದರ ಕೆಳಗಡೆ ಕರ್ನಾಟಕ ರತ್ನ ಎಂದು ಬರೆದಿದಂತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಎರಡು ಎಕರೆ ಭತ್ತದ ಪೈರಿನಲ್ಲಿ ರೂಪುಗೊಂಡಿರುವ ಪುನೀತ್‌ ರಾಜಕುಮಾರ ಅವರ ಭಾವಚಿತ್ರ ನೂರಾರು ಅಡಿ ವ್ಯಾಪಿಸಿದ್ದು, ಅವರ ಎರಡೂ ಕಣ್ಣುಗಳು ತಲಾ 35 ಅಡಿ ವಿಸ್ತೀರ್ಣವನ್ನು ಹೊಂದಿವೆ. ಮುಖದ ಭಾಗ 140 ಅಡಿ ವಿಸ್ತೀರ್ಣದಲ್ಲಿದ್ದು, ಕೆಳಗಡೆ ಬರೆದಿರುವ ಕರ್ನಾಟಕ ರತ್ನ ಪದವು 40 ಅಡಿ ವ್ಯಾಪಿಸಿದೆ. ಮಳೆ ಕೊರತೆ, ತುಂಗಭದ್ರಾ ಎಡದಂಡೆ ಕಾಲುವೆಗೆ ಅಸಮರ್ಪಕ ನೀರು ಸರಬರಾಜಿನ ನಡುವೆಯೂ ಟ್ಯಾಂಕರ್‌ ಮುಖಾಂತರ ನೀರನ್ನು ಹಾಯಿಸಿ ಬೆಳೆಯನ್ನು ಸಂರಕ್ಷಿಸಿದ್ದಾರೆ. ಇದೇ ಅ. 29ರಂದು ಪುನೀತ್ ರಾಜಕುಮಾರ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಅವರಿಗೆ ವಿಶೇಷವಾಗಿ ಸಲ್ಲಿಸುವ ಸದುದ್ದೇಶಕ್ಕಾಗಿ ರೈತ ಸತ್ಯನಾರಾಯಣ ಈ ಅಭಿಮಾನದ ಕಾರ್ಯಕ್ಕೆ ಮುಂದಾಗಿದ್ದಾರೆ. ಭತ್ತದ ಪೈರಿನಲ್ಲಿ ಮೂಡಿರುವ ಪುನೀತ್‌ ಅವರ ಭಾವಚಿತ್ರದ ವಿಡಿಯೋ ತುಣುಕನ್ನು ಸತ್ಯನಾರಾಯಣ ಅವರು ಬೆಂಗಳೂರಿಗೆ ತೆರಳಿ ಅಪ್ಪು ಸಹೋದರರಾದ ಶಿವರಾಜ್ ಕುಮಾರ ಹಾಗೂ ರಾಘವೇಂದ್ರ ರಾಜಕುಮಾರ ಹಾಗೂ ಅಶ್ವಿನಿ ಪುನೀತ್‌ ರಾಜಕುಮಾರ ಅವರಿಗೆ ತೋರಿಸಿದ್ದು, ವಿಡಿಯೋ ನೋಡಿ ಅಶ್ವಿನಿ ಅವರು ಸಂತೋಷಪಟ್ಟಿದ್ದಾರೆ ಎಂದು ರೈತ ಸತ್ಯನಾರಾಯಣ ತಿಳಿಸಿದ್ದಾರೆ.