ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ದೇವರಲ್ಲದೇ ಮನುಷ್ಯರನ್ನು ಪೂಜೆ ಮಾಡುತ್ತೇವೆ ಎಂದರೇ ಅವರಲ್ಲಿ ಇರುವಂತಹ ಒಳ್ಳೆಯ ಗುಣ ಹಾಗೂ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟಂತಹವರನ್ನು ದೇವರಾಗಿ ಪೂಜೆ ಮಾಡುತ್ತಾ ಬರುತ್ತಿದ್ದೇವೆ. ಆ ಸಾಲಿನಲ್ಲಿ ಪುನೀತ್ ರಾಜಕುಮಾರ್ ಸೇರುತ್ತಾರೆ ಎಂದು ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್ ತಿಳಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ದಿ. ಪಾರ್ವತಮ್ಮ ಕಲಾ ಸಂಘದಿಂದ ಕಲಾವಿದ ಕುಮಾರ್ ನೇತೃತ್ವದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ೫೦ನೇ ವರ್ಷದ ಜನ್ಮದಿವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಲಾವಿದರಾದ ಕುಮಾರ್ ಅವರ ನೇತೃತ್ವದಲ್ಲಿ ಎಲ್ಲರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ೫೦ನೇ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಾಯಕ ನಟ ಪುನೀತ್ ರಾಜಕುಮಾರ್ ಅವರನ್ನು ಇಷ್ಟೊಂದು ನೆನಪು ಮಾಡಿಕೊಳ್ಳುವುದಕ್ಕೆ ಕಾರಣಗಳಿವೆ. ಜನರಿಗೆ ಕಲೆ ಒಂದೇ ಅಲ್ಲ, ಮಾನವೀಯತೆಯ ಮೌಲ್ಯ ಏನು ಎಂಬುದನ್ನು ಸರಳತೆಯಿಂದ ತಿಳಿಸಿದ್ದಾರೆ. ಎಷ್ಟು ಹಣ ಇದ್ದರೂ ಹೇಗೆ ಬದುಕಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ನಮ್ಮಲ್ಲಿ ಇರುವಂತಹ ಒಳ್ಳೆಯ ಗುಣ ಹಾಗೂ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟಂತಹವರನ್ನು ದೇವರಾಗಿ ಪೂಜೆ ಮಾಡುತ್ತಾ ಬರುತ್ತಿದ್ದೇವೆ. ಅದೇ ಸಾಲಿನಲ್ಲಿ ಪುನೀತ್ ರಾಜಕುಮಾರ್ ಅವರನ್ನ ಕಾಣುತ್ತಿದ್ದೇವೆ ಎಂದು ಹೇಳಿದರು. ಇಡೀ ರಾಜ್ಯದಲ್ಲಿ ಮುಂದೊಂದು ದಿನ ದೇವರಾಗಿ ಪೂಜೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇವರು ಕಲಾವಿದರು ಮಾತ್ರವಲ್ಲ. ಎಲ್ಲಾ ಮೌಲ್ಯವಿರುವ ವ್ಯಕ್ತಿ. ಮುಂದೆ ಇವರ ಆಚರಣೆಗಳನ್ನು ಕಲಾವಿದ ಕುಮಾರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿವರ್ಷ ಇಂತಹ ಹಲವಾರು ಕಾರ್ಯಕ್ರವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಇನ್ನಷ್ಟು ಆದರ್ಶವನ್ನು ಮೈಗೂಡಿಸಿಕೊಂಡು ಒಳ್ಳೆಯ ಕಾರ್ಯಕ್ರಮ ಮುಂದುವರೆಸಲಿ ಎಂದು ಶುಭಹಾರೈಸಿದರು.ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಮಾತನಾಡಿ, ಕಲಾವಿದ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದು, ಭಾರತೀಯ ಚಿತ್ರರಂಗದ ಧ್ರುವತಾರೆಯಾದ ಎಂ.ಜೆ., ಎಂ.ಟಿ.ಆರ್. ರಾಜಕುಮಾರ್ ಅವರ ಸಾಲಿನಲ್ಲಿ ಮತ್ತೊಬ್ಬ ನಾಯಕ ನಟ ಇದ್ದಾರೆ ಎಂದರೇ ಪುನೀತ್ ರಾಜಕುಮಾರ್ ಎಂದು ಬಣ್ಣಿಸಿದರು. ಮಾರ್ಚ್ ೧೭ರಂದು ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನವನ್ನು ಸ್ಪೂರ್ತಿ ದಿನವನ್ನಾಗಿ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಈಗ ಸಿದ್ದರಾಮಯ್ಯ ಕೂಡ ಮಾಡುವುದಾಗಿ ಹೇಳಿ ಕಾರ್ಯರೂಪಕ್ಕೆ ಬರಲಿಲ್ಲ. ರಾಜಕಾರಣಿಗಳು ರಾಜಕೀಯವಾಗಿ ಮಾತನಾಡುತ್ತಾರೆ, ಬದ್ಧತೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ವರ್ಷವಾದರೂ ಪುನೀತ್ ರಾಜಕುಮಾರ್ ದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲು ಮುಂದಾಗಲಿ ಎಂದು ಮನವಿ ಮಾಡಿ ಆಗ್ರಹಿಸಿದರು.
ಪುನೀತ್ ರಾಜಕುಮಾರ್ ೫೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕ್ರಮದಲ್ಲಿ ಪುನೀತ್ ಸ್ವರನಮನ ಕಾರ್ಯಕ್ರಮ ನಡೆಸಲಾಯಿತು. ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿಸಿ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದರು. ಇದೇ ವೇಳೆ ಹಾಡಿಗೆ ಮಕ್ಕಳು ನೃತ್ಯ ಮಾಡಿ ರಂಜಿಸಿದರು.ಇದೇ ವೇಳೆ ಹೆಸರಾದಂತಹ ಗಾಯಕರಾದ ಕುಮಾರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಅಂಜಲಿ, ರಮೇಶ್, ಚಂದ್ರು ಸಾಲ್ಯ ಮೂಡಿಗೆರೆ, ಮಂಜು ಸಕಲೇಶಪುರ, ಭಾನು ಇತರರು ಉಪಸ್ಥಿತರಿದ್ದರು.