ಸಾರಾಂಶ
ನಲ್ಲೂರು ಗ್ರಾಮದಲ್ಲಿ ಡಾ.ಪುನೀತ್ ಪುತ್ಥಳಿ ಅನಾವರಣಗೊಳಿಸಿ ಶಾಸಕ ಶಿವಗಂಗಾ ಬಣ್ಣನೆ
ಕನ್ನಡಪ್ರಭವಾರ್ತೆ ಚನ್ನಗಿರಿಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಕನ್ನಡಿಗರ ಜನಮಾನಸದಲ್ಲಿ ನೆಲೆಯೂರಿದ್ದು ಅವರ ಸಾಮಾಜಿಕ ಸೇವೆ ಮತ್ತು ಜನರಿಗೆ ಸಹಾಯ ಹಸ್ತ ಚಾಚಿದ ಮಹಾನ್ ಕಲಾವಿದ ಪುನೀತ್ ರಾಜ್ ಕುಮಾರ್. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಕನ್ನಡಿಗರ ಕಣ್ಮಣಿ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.
ತಾಲೂಕಿನ ನಲ್ಲೂರು ಗ್ರಾಮದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಡಾ.ಪುನೀತ್ ರಾಜ್ ಕುಮಾರ್ ಅವರ 4ಅಡಿ ಎತ್ತರದ 181ಕೆ.ಜಿ.ತೂಕದ ಕಂಚಿನ ಪುತ್ಥಳಿಯ ಗ್ರಾಮದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಅನಾವರಣಗೊಳಿಸಿ ಮಾತನಾಡಿ ಇಂತಹ ಮಹಾನ್ ಕಲಾವಿದನ ಪುತ್ಥಳಿ ಅನಾವರಣಗೊಳಿಸುವ ಪುಣ್ಯ ನನಗೆ ಲಭಿಸಿರುವುದು ನನ್ನ ಭಾಗ್ಯ. ಪುನೀತ್ ರಾಜ್ ಕುಮಾರ್ (ಅಪ್ಪು) ಅಗಲಿ ಎರಡು ವರ್ಷವಾದರೂ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂದರು.ಸಮಾರಂಭದ ಅಧ್ಯಕ್ಷತೆ ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಗೌರವ ಅಧ್ಯಕ್ಷ ನಲ್ಲೂರಿನ ಆರ್.ಪರಮೇಶ್ವರಪ್ಪ ಮಾತನಾಡಿ ಕಳೆದ 8ತಿಂಗಳ ಹಿಂದೆಯೇ ಡಾ.ಪುನೀತ್ ರಾಜ್ ಕುಮಾರ್ ಪುತ್ಥಳಿ ಮದ್ರಾಸಿನಲ್ಲಿ ಮಾಡಿಸಿ ತರಲಾಗಿತ್ತು ಆಗ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಕಾರಣ ಪುತ್ಥಳಿ ಅನಾವರಣಗೊಳಿಸಲು ಆಗಿರಲಿಲ್ಲ ಈ ಪುತ್ಥಳಿಯ ಅನಾವರಣಕ್ಕೆ ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರ ಕರೆತರಲು ಎರಡು ಬಾರಿ ಪ್ರಯತ್ನಿಸಿ 2024ರ ಮಾರ್ಚನಲ್ಲಿ ಬರುವುದಾಗಿ ನಟ ಶಿವರಾಜ್ ಕುಮಾರ್ ತಿಳಿಸಿದ್ದರು ಆ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಬಹುದೆಂದು ಶಾಸಕರಿಂದ ಆನಾವರಣಗೊಳಿಸಲಾಯಿತು ಎಂದು ಹೇಳಿದರು.
ಚಿತ್ರನಟ ಪುನೀತ್ ರಾಜ್ ಕುಮಾರ್ ಕುರಿತು ಸಂಪನ್ಮೂಲ ವ್ಯಕ್ತಿ ಕಾಕನೂರು ಎಂ.ಬಿ.ನಾಗರಾಜ್ ಮಾತನಾಡಿದರು.ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್, ಎಂ.ಯೋಗೇಶ್, ತಾಲೂಕು ಬಿಜೆಪಿ ಮುಖಂಡ ಎಚ್.ಎಸ್.ಶಿವಕುಮಾರ್, ಡಾ.ರವಿಕುಮಾರ್, ಇಮ್ತಿಯಾಜ್ ಬೇಗ್, ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಹೆಚ್.ದಿನೇಶ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಬಾಗಜ್ಜಿ ಮಂಜಣ್ಣ, ರವಿ. ಮಧು, ಪುತ್ಥಳಿ ದಾನಿ ರೇಖಾ ಪರಮೇಶ್ವರಪ್ಪ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.