ಸಾರಾಂಶ
ಹಿರಯೂರು ನಗರದ ಗಾಂಧಿ ವೃತ್ತದಲ್ಲಿ ನಟ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ಹಂಚಿ ಉಪಹಾರ ವಿತರಿಸಲಾಯಿತು.
ನಗರಸಭೆ ಸದಸ್ಯ ಜಗದೀಶ್ ಅಭಿಮತ । ಅಪ್ಪು ಹುಟ್ಟಹಬ್ಬದ ಹಿನ್ನೆಲೆ ಅನ್ನಪ್ರಸಾದ ಕನ್ನಡಪ್ರಭ ವಾರ್ತೆ ಹಿರಿಯೂರು
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬದ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ದೊಡ್ಮನೆ ಅಭಿಮಾನಿ ಬಳಗ, ಪುನೀತ್ ರಾಜ್ ಕುಮಾರ್ ಸೇವಾ ಸಮಿತಿ ಹಾಗೂ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಂಚಿ ಉಪಹಾರ ವಿತರಣೆ ಮಾಡಲಾಯಿತು.ಈ ವೇಳೆ ನಗರಸಭೆ ಸದಸ್ಯ ಜಗದೀಶ್ ಮಾತನಾಡಿ, ಸಾವಿನ ನಂತರವೂ ಜನರ ಮನದಲ್ಲಿ ಜೀವಂತವಾಗಿರಬಹುದು ಎಂಬುದನ್ನು ಪುನೀತ್ ಸಾಧಿಸಿ ತೋರಿಸಿದ್ದಾರೆ. ನಟರಾಗಿ, ನಿರ್ಮಾಪಕರಾಗಿ, ಗಾಯಕರಾಗಿ ದೊಡ್ಡ ಹೆಸರು ಮಾಡಬಹುದು. ಆದರೆ ವ್ಯಕ್ತಿತ್ವದಿಂದಲೇ ಗುರುತಿಸಲ್ಪಡುವುದಿದೆಯಲ್ಲ. ಅದು ಸಣ್ಣ ಸಂಗತಿಯಲ್ಲ. ಪುನೀತ್ ರಾಜ್‌ಕುಮಾರ ಅಜರಾಮರವಾಗಿ ಉಳಿದಿದ್ದಾರೆ. ಅವರ ಬದುಕು ಮತ್ತು ವ್ಯಕ್ತಿತ್ವ ಇಂದಿನ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಪುನೀತ್ ಸೇವಾ ಸಂಸ್ಥೆ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಪುನೀತ್ ಅವರ ಆದರ್ಶ ಗುಣಗಳನ್ನು ಇಂದಿನ ನಟರು, ರಾಜಕಾರಣಿಗಳು, ಕ್ರೀಡಾಪಟುಗಳು ಅಳವಡಿಸಿಕೊಳ್ಳಬೇಕು. ಯಶಸ್ಸನ್ನು ಎಂದಿಗೂ ನೆತ್ತಿಗೇರಿಸಿಕೊಳ್ಳದೆ ಸಾಮಾನ್ಯ ಜನರ ಸಂಕಷ್ಟಗಳಿಗೆ ಸದಾ ಮಿಡಿದ ಹೃದಯ ಪುನೀತ್ ಅವರದ್ದು. ಪುನೀತ್ ರವರ ಸೇವಾ ಮನೋಭಾವ, ಬಡವರಿಗೆ, ಹಸಿದವರಿಗೆ ಮಾಡಿದ ಸಹಾಯ ನೋಡಿ ಭಗವಂತನಿಗೇ ಹೊಟ್ಟೆಕಿಚ್ಚು ಆಗೀತ್ತೇನೋ ಅನಿಸುತ್ತದೆ. ಕೋಟ್ಯಂತರ ಜನರ ಪ್ರೀತಿ ಗಳಿಸಿದ ಅವರು ನಮಗೆಲ್ಲಾ ಮಾದರಿಯಾಗಿ ಉಳಿದಿದ್ದಾರೆ ಎಂದರು.ಈ ವೇಳೆ ನಗರಸಭೆ ಸದಸ್ಯ ವಿಠ್ಠಲ್ ಪಾಂಡುರಂಗ, ಅಭಿಮಾನಿಗಳ ಬಳಗದ ಮಾರುತಿ, ಕಬಡ್ಡಿ ರವಿ, ಶಿವಪ್ರಕಾಶ್, ಅಜಯ್ ಕುಮಾರ್, ಗೋವಿಂದ, ಡಾ.ರಾಜ್ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ, ಹೇಮಂತ್, ರಘು, ನವೀನ್, ಕಾಂತ, ವೆಂಕಟೇಶ್ ಮುಂತಾದವರು ಹಾಜರಿದ್ದರು.