ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಬದ್ಧತೆ ಸ್ಫೂರ್ತಿಯಾಗಿದ್ದಾರೆ. ಅವರ ಆದರ್ಶಗಳು, ಸಾಮಾಜಿಕ ಕೆಲಸಗಳು ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಹೇಳಿದರು.
ನಗರದ ಜೆ.ಸಿ.ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಮತ್ತಿತರೆ ಸಂಘಟನೆಗಳು ಜೊತೆಗೂಡಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ರವರ 49ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪ್ರತಿಮೆಯನ್ನು ಮಂಡ್ಯ ನಗರದ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿ ಸ್ಥಾಪಿಸುವುದರ ಮೂಲಕ ಹೊಸ ತಲೆಮಾರಿನ ಯುವಜನಾಂಗದಲ್ಲಿ ಸಾಮಾಜಿಕ ಬದ್ಧತೆ ಮೂಡಿಸಬೇಕು. ಕರವೇ, ವಿವಿಧ ಸಂಘಟನೆಗಳು ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಬೆಂಬಲದ ನಡುವೆ ಪುನೀತ್ ರಾಜ್‌ಕುಮಾರ್ ಪ್ರತಿಮೆಯನ್ನು ಸ್ಥಾಪಿಸುವ ಉದ್ದೇಶವಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಪ್ರತಿಭೆ ಪುನೀತ್ ರಾಜ್‌ಕುಮಾರ್, ತಂದೆಯ ಹಾದಿಯಲ್ಲೇ ಅತ್ಯುತ್ತಮ ನಟನೆಯ ಮೂಲಕ ದಾಖಲೆಯನ್ನು ಸೃಷ್ಠಿಸಿದ ಅವರು, ತೆರೆಯ ಮೇಲೆ ಮತ್ತು ಸಮಾಜದ ನಡುವೆ ನಿಜವಾದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರು ಮರೆಯಾಗಿದ್ದರೂ, ಅವರು ಮಾಡಿರುವ ಜನಪರ ಕಾರ್ಯಗಳು ಜೀವಂತವಾಗಿ ಕಾಣುತ್ತಿವೆ ಎಂದು ಬಣ್ಣಿಸಿದರು.ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖೀ ಕಾರ್ಯಗಳು ಇಂದಿನ ಯುವಜನಾನಂಗಕ್ಕೆ ಮಾದರಿಯಾಗಿವೆ. ಪರೋಪಕಾರದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವುದರಲ್ಲಿ ಪುನೀತ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕಲಾತ್ಮವಾಗಿ ಅತಿ ಎತ್ತರಕ್ಕೆ ಬೆಳೆದಿದ್ದರೂ ಅವರ ವಿನಯವಂತಿಕೆ ಇಡೀ ಚಿತ್ರರಂಗಕ್ಕೆ ಮಾದರಿಯಾಗಿತ್ತು ಎಂದರು.
ಕರವೇ ರಾಜ್ಯ ಸಮಿತಿ ಸದಸ್ಯ ಮಾ.ಸೋ. ಚಿದಂಬರ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಶ್ರೆಮಂತಗೊಳಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದರು. ಅದೇ ಮಾದರಿಯಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ಸಾಗಿ ಬಂದರು. ಅವರು ಅತ್ಯಲ್ಪ ಜೀವಿತ ಅವಧಿಯಲ್ಲೇ ಧೀರ್ಘ ಕಾಲದ ಸಾಧನೆಯನ್ನು ಮಾಡಿದ್ದು ಮಹತ್ವದ್ದಾಗಿದೆ ಎಂದು ಕೊಂಡಾಡಿದರು.ಕರವೇ ಗೌರವಾಧ್ಯಕ್ಷ ಕೆ.ಟಿ. ಶಂಕರೇಗೌಡ ಮಾತನಾಡಿ, ಪುನೀತ್‌ರವರ ಅಗಲಿಕೆಯ ನಂತರವೂ ಅವರ ಸಿನಿಮಾಗಳು ಮತ್ತು ಜನಪರ ಕಾರ್ಯಗಳು ಇಂದಿಗೂ ಜನಮಾನಸದಲ್ಲಿವೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ಎಚ್.ಟಿ.ಶ್ರೀನಿವಾಸ್, ರಾಜೇಶ್, ಎಚ್.ಆರ್.ಸಂಜಯ್, ಮಹಾಲಿಂಗ, ಪುಟ್ಟಸ್ವಾಮಿ, ಆನಂದ್, ಸತೀಶ್ ಗುಡಿಗೇನಹಳ್ಳಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.