ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಉದ್ದೇಶದಿಂದಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಡಾ. ಪುನೀತ್ ರಾಜಕುಮಾರ್ ಅವರು ಮಾಡಿದ ದಾನ ಧರ್ಮಗಳು ಇಂದಿಗೂ ಅಜರಾಮರವಾಗಿದೆ. ಪುನೀತ್ ರಾಜ್‌ಕುಮಾರ್ ನಿಧನದ ದಿನವೇ ಕ್ಷೇತ್ರದಲ್ಲಿ ನಡೆಯಬೇಕಿದ್ದ 127 ಕೋಟಿ ರಣಘಟ್ಟ ಯೋಜನೆಯ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಅಂದು ಅವರ ಅಗಲಿಕೆ ಇಡೀ ಕ್ಷೇತ್ರವನ್ನು ದುಃಖದಲ್ಲಿ ಮುಳುಗಿಸಿತ್ತು. ಋಗ್ವೇದ ರೆಸಾರ್ಟ್ ಕೇವಲ ರೆಸಾರ್ಟ್ ಅಲ್ಲ, ಗ್ರಂಥಾಲಯ ಹಾಗೂ ಆರೋಗ್ಯ ಸೇವೆಗಳನ್ನೊಳಗೊಂಡ ಸಾಮಾಜಿಕ ಸೇವಾ ಕೇಂದ್ರವಾಗಲಿದೆ , ಡಿಶಾಂತ್ ಕುಮಾರ್ ಮತ್ತು ಅವರ ಕುಟುಂಬ ಸಮಾಜಮುಖಿ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುಡಾ. ಪುನೀತ್ ರಾಜ್‍ಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಹಗರೆಯ ಋಗ್ವೇದ ರೇಸಾರ್ಟ್‌ನಲ್ಲಿ ಆಯೋಜಿಸಿದ್ದ ಗ್ರಂಥಾಲಯ ಉದ್ಘಾಟನೆ ಹಾಗೂ 15 ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು.

ಡಾ. ಪುನೀತ್ ರಾಜ್‍ಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಹಗರೆಯ ಋಗ್ವೇದ ರೇಸಾರ್ಟ್‌ನಲ್ಲಿ ಮಾಲೀಕರಾದ ಡಿಶಾಂತ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಭವ್ಯ ಸ್ವಾಗತ ಕೋರಿದರು. ನಂತರ ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಉದ್ದೇಶದಿಂದಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಡಾ. ಪುನೀತ್ ರಾಜಕುಮಾರ್ ಅವರು ಮಾಡಿದ ದಾನ ಧರ್ಮಗಳು ಇಂದಿಗೂ ಅಜರಾಮರವಾಗಿದೆ. ಪುನೀತ್ ರಾಜ್‌ಕುಮಾರ್ ನಿಧನದ ದಿನವೇ ಕ್ಷೇತ್ರದಲ್ಲಿ ನಡೆಯಬೇಕಿದ್ದ 127 ಕೋಟಿ ರಣಘಟ್ಟ ಯೋಜನೆಯ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಅಂದು ಅವರ ಅಗಲಿಕೆ ಇಡೀ ಕ್ಷೇತ್ರವನ್ನು ದುಃಖದಲ್ಲಿ ಮುಳುಗಿಸಿತ್ತು. ಋಗ್ವೇದ ರೆಸಾರ್ಟ್ ಕೇವಲ ರೆಸಾರ್ಟ್ ಅಲ್ಲ, ಗ್ರಂಥಾಲಯ ಹಾಗೂ ಆರೋಗ್ಯ ಸೇವೆಗಳನ್ನೊಳಗೊಂಡ ಸಾಮಾಜಿಕ ಸೇವಾ ಕೇಂದ್ರವಾಗಲಿದೆ , ಡಿಶಾಂತ್ ಕುಮಾರ್ ಮತ್ತು ಅವರ ಕುಟುಂಬ ಸಮಾಜಮುಖಿ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ. ಶಿವರಾಜು ಮಾತನಾಡಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸರಳತೆ, ಶಾಂತ ಸ್ವಭಾವ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಡಾ. ರಾಜ್‌ಕುಮಾರ್ ಅವರಂತಹ ಹೆಸರಾಂತ ಕುಟುಂಬದ ಸೊಸೆಯಾಗಿದ್ದರೂ ಅಶ್ವಿನಿ ಅವರು ಎಂದಿಗೂ ಅಹಂಕಾರ ತೋರಿಸಿಲ್ಲ. ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸಾದ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಅಶ್ವಿನಿ ಅವರು ಅತ್ಯಂತ ಜವಾಬ್ದಾರಿಯಿಂದ ಮುನ್ನಡೆಸುತ್ತಿದ್ದಾರೆ ಜೊತೆಗೆ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಕಷ್ಟದ ಸಮಯದಲ್ಲೂ ಧೈರ್ಯವಾಗಿ ನಿಂತು ತಮ್ಮ ಪತಿಯ ಕನಸುಗಳನ್ನು ಜೀವಂತವಾಗಿಟ್ಟಿರುವ ಅಶ್ವಿನಿ ಅವರು ಇಂದು ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಇದೇ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು ಗ್ರಂಥಾಲಯ ಉದ್ಘಾಟನೆ ಮಾಡಿದ ಬಳಿಕ 15 ಬಡ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದರು. ಜೊತೆಗೆ ಹಗರೆ ಭಾಗದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು.ಈ ಸಂದರ್ಭದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್, ಹಗರೆ ಡಿಶಾಂತ್, ಬ್ಯಾಂಕ್ ವ್ಯವಸ್ಥಾಪಕಿ ಮಮತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.