ದುಷ್ಟರನ್ನು ಶಿಕ್ಷಿಸಿ, ಶಿಷ್ಟ ರಕ್ಷಣೆಯೇ ದಸರಾ ಸಂಕೇತ: ಚಂದ್ರಶೇಖರ್ ನಾಯ್ಕ್

| Published : Oct 14 2024, 01:15 AM IST

ದುಷ್ಟರನ್ನು ಶಿಕ್ಷಿಸಿ, ಶಿಷ್ಟ ರಕ್ಷಣೆಯೇ ದಸರಾ ಸಂಕೇತ: ಚಂದ್ರಶೇಖರ್ ನಾಯ್ಕ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯದಶಮಿಯ ಅಂಗವಾಗಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಸಾಗರ ಬನ್ನಿಕಟ್ಟೆಯಲ್ಲಿ ಸೀಮೋಲಂಘನಾ ಶಾಸ್ತ್ರ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸಾಗರ

ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಣೆ ಮಾಡುವುದು ದಸರಾ ಹಬ್ಬದ ಪ್ರಮುಖ ಸಂದೇಶವಾಗಿದೆ. ನವದುರ್ಗೆಯರು ನಾಡನ್ನು ರಕ್ಷಣೆ ಮಾಡುವ ಸಲುವಾಗಿ ಮಹಿಷಾಸುರಾದಿ ರಾಕ್ಷಸರನ್ನು ಮರ್ದನ ಮಾಡುವ ವಿಶೇಷ ಸಂದರ್ಭ ಇದಾಗಿದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಬನ್ನಿಕಟ್ಟೆಯಲ್ಲಿ ಶನಿವಾರ ತಾಲ್ಲೂಕು ಆಡಳಿತದ ವತಿಯಿಂದ ಸೀಮೋಲಂಘನಾ ಶಾಸ್ತ್ರರ ನೆರವೇರಿಸಿ ಮಾತನಾಡಿದ ಅವರು, ನಾಡಹಬ್ಬವಾಗಿರುವ ದಸರಾವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿಜಯದಶಮಿಯ ದಿನ ಸಾಗರದಲ್ಲಿ ಲಾಗಾಯ್ತಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿದೆ ಎಂದು ಹೇಳಿದರು.

ಸಾಗರದಲ್ಲಿ ವಿಜಯದಶಮಿ ದಿನ ವಿವಿಧ ದೇವಸ್ಥಾನಗಳ ಪಲ್ಲಕ್ಕಿಗಳು ಒಂದೆ ಕಡೆ ಸಮಾಗಮಗೊಂಡು ಮೆರವಣಿಗೆ ಮೂಲಕ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವುದು ಅವಿಸ್ಮರಣೀಯ ಕ್ಷಣವಾಗಿರುತ್ತದೆ. ಊರಿನ ಬೇರೆಬೇರೆ ಭಾಗದಿಂದ ಸಹಸ್ರಾರು ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾಗರ ಸಾಂಸ್ಕೃತಿಕ, ಸಾಹಿತ್ಯದ ಜೊತೆಗೆ ಧಾರ್ಮಿಕವಾಗಿಯೂ ತನ್ನದೆ ಮಹತ್ವದ ಹೊಂದಿದೆ ಎಂದು ಹೇಳಿದರು.

ಶಾಸಕ ಗೋಪಾಲಕೃಷ್ಣ ಬೇಳೂರು, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಗಜಾನನ ಭಟ್, ಸುಧೀಂದ್ರ ಭಟ್, ಹರೀಶ್ ಭಟ್, ವಿವಿಧ ದೇವಸ್ಥಾನ ಗಳ ಪ್ರಮುಖರು ಹಾಜರಿದ್ದರು.ಅಧರ್ಮದ ಗೆಲುವು ತಾತ್ಕಾಲಿಕ: ಶ್ರೀ ವಿನಾಯಕ ದೇವರು

ಸಾಗರ: ಪುರಾಣ ಕಾಲದಿಂದಲೂ ಎಲ್ಲ ಸಂದರ್ಭದಲ್ಲಿ ಧರ್ಮವೇ ಗೆದ್ದಿದೆ. ಧರ್ಮದ ಎದುರು ಅಧರ್ಮದ ಗೆಲುವು ತಾತ್ಕಾಲಿಕ ಮಾತ್ರ ಎಂದು ಬಳಸಗೋಡು ಮಠದ ಶ್ರೀ ವಿನಾಯಕ ದೇವರು ಹೇಳಿದರು.ಪಟ್ಟಣದ ಗಂಗಾಪರಮೇಶ್ವರಿ ರಸ್ತೆಯ ಕುಕ್ವಡದಾಂಬಾ ಭವಾನಿ ದೇವಸ್ಥಾನದಲ್ಲಿ ಶನಿವಾರ ಜಂಗಮ ಮಹಿಳಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯದಶಮಿ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ ಸ್ಥಾಪನೆಗೆ ಆದಿಶಕ್ತಿ ಜನ್ಮವೆತ್ತಿದ ಅನೇಕ ಕಥೆಗಳು ನಮಗೆ ಪ್ರೇರಣೆಯಾಗಬೇಕು. ನವರಾತ್ರಿ ಸಂದರ್ಭದಲ್ಲಿ ಪುಣ್ಯಕಥೆಗಳ ಶ್ರವಣದಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.ಕುಕ್ವಡದಾಂಬಾ ಭವಾನಿ ದೇವಸ್ಥಾನ ಅತ್ಯಂತ ಪ್ರಾಚೀನವಾಗಿದ್ದು, ಶಿಥಿಲವಾಗಿದ್ದ ದೇವಸ್ಥಾನವನ್ನು ಪುನರ್ ನಿರ್ಮಿಸುವ ಕೆಲಸ ಹಂತಹಂತವಾಗಿ ನಡೆಯುತ್ತಿದೆ. ಇಂತಹ ಧರ್ಮಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರಲ್ಲದೆ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ಕಲಿಯುಗದಲ್ಲಿ ಸಾಮೂಹಿಕ ಪೂಜೆಗೆ ವಿಶೇಷವಾದ ಫಲ ದೊರೆಯುತ್ತದೆ ಎಂದು ಹೇಳಿದರು.

ಜಂಗಮ ಮಹಿಳಾ ಸಮಾಜದ ಅರುಣ ಹಿರೇಮಠ, ಉಷಾ ಗಿರಿಧರ್, ವಿಮಲ, ದಾಕ್ಷಾಯಿಣಿ, ಪ್ರಿಯಾ ರವಿಸ್ವಾಮಿ ಇನ್ನಿತರರು ಹಾಜರಿದ್ದರು.