ಮಾಲೀಕರು, ಪಾಲಕರು ಮಂಡಕ್ಕಿ, ಅವಲಕ್ಕಿ ಭಟ್ಟಿಗಳಲ್ಲಿ ದುಡಿಯುತ್ತಿರುವ ಮಕ್ಕಳನ್ನು ದುಡಿಮೆಯ ಸಂಕೋಲೆಯಿಂದ ಬಿಡುಗಡೆ ಮಾಡಬೇಕು. ಅಲ್ಲದೆ, ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದ್ದಾರೆ.

- ನ್ಯಾಯಾಧೀಶ ಮಹಾವೀರ ಎಚ್ಚರಿಕೆ । ಬಾಲಕಾರ್ಮಿಕ-ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಜಾಥಾ- ಸ್ಟಿಕ್ಕರ್‌ ಅಂಟಿಸುವ ಕಾರ್ಯಕ್ರಮ - - -

ಕನ್ನಡಪ್ರಭ ವಾರ್ತೆ ದಾವಣಗರೆ

ಮಾಲೀಕರು, ಪಾಲಕರು ಮಂಡಕ್ಕಿ, ಅವಲಕ್ಕಿ ಭಟ್ಟಿಗಳಲ್ಲಿ ದುಡಿಯುತ್ತಿರುವ ಮಕ್ಕಳನ್ನು ದುಡಿಮೆಯ ಸಂಕೋಲೆಯಿಂದ ಬಿಡುಗಡೆ ಮಾಡಬೇಕು. ಅಲ್ಲದೆ, ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.

ಇಲ್ಲಿಯ ಬಾಷಾ ನಗರದ ಮಂಡಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿ ಎದುರು ಡಾನ್ ಬಾಸ್ಕೋ ಸಂಸ್ಥೆ, ಚೈಲ್ಡ್ ಸೇಫ್ಟಿ ನೆಟ್‌, ತೆರೆದ ತಂಗುದಾಣ ಯೋಜನೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಡಕ್ಕಿ ಮತ್ತು ಅವಲಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರಿನ ಬ್ರೆಡ್ಸ್‌ ಸಂಸ್ಥೆಯಿಂದ ಬುಧವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಹಾಗೂ ಭಟ್ಟಿ ಘಟಕಗಳಿಗೆ ಅರಿವಿನ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ಖಂಡಿಸಬೇಕು:

ಸಾಮಾನ್ಯವಾಗಿ ಮಂಡಕ್ಕಿ, ಅವಲಕ್ಕಿ ಎಲ್ಲರಿಗೂ ಬೇಕು. ಹಾಗಂತ ಮಕ್ಕಳ ಭವಿಷ್ಯ, ಬದುಕು, ಬಾಲ್ಯವನ್ನು ನಾಶಪಡಿಸಿ, ದುಡಿಸಿಕೊಳ್ಳುವುದಲ್ಲ. ಮಂಡಕ್ಕಿ, ಅವಲಕ್ಕಿ ಭಟ್ಟಿ ಮಾಡಲು ಪರ್ಯಾಯ ತಾಂತ್ರಿಕ ವ್ಯವಸ್ಥೆ, ಆಧುನಿಕ ತಂತ್ರಜ್ಞಾನವಿದೆ. ಈ ಭಾಗದ ಮಕ್ಕಳು ಶೇ.100ಕ್ಕೆ 100ರಷ್ಟು ಶಾಲೆಯಲ್ಲಿರಬೇಕು. ಬಾಲ್ಯಾವಸ್ಥೆಯ ಮಕ್ಕಳ ದುಡಿಮೆಯನ್ನು ಎಲ್ಲರೂ ಖಂಡಿಸಬೇಕು. ಮಕ್ಕಳ ದುಡಿಮೆ, ಕುಟುಂಬದ ಕಷ್ಟಗಳಿದ್ದರೆ ಮಕ್ಕಳ ಸಹಾಯವಾಣಿ 1098, ತುರ್ತು ಪೊಲೀಸ್ ಸೇವೆ 112, ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ 15100 ಅಥವಾ ಡಾನ್ ಬಾಸ್ಕೋ ಸಂಸ್ಥೆ, ಕಾರ್ಮಿಕ ಇಲಾಖೆಗೆ ಸಂಪರ್ಕಿಸಿ. ಶೀಘ್ರವೇ ಜಿಲ್ಲಾಡಳಿತದಿಂದಲೇ ಇಲ್ಲಿ ದೊಡ್ಡಮಟ್ಟದ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಅವರು ಸೂಚಿಸಿದರು.

ಕಾನೂನು ಪ್ರಕಾರ ಶಿಕ್ಷೆ:

ಮಕ್ಕಳ ಶಿಕ್ಷಣವನ್ನು ಕಸಿಯುವುದು ಸಂಸ್ಕಾರವಲ್ಲ. ಅಲ್ಲದೇ, ಮಕ್ಕಳನ್ನು ದುಡಿಮೆ, ಕೆಲಸಕ್ಕೆ ಇಟ್ಟುಕೊಳ್ಳುವುದೂ ಶಿಕ್ಷಾರ್ಹ ಅಪರಾಧ. ಅಪಾಯಕಾರಿ ಆಗಿರಲಿ ಅಥವಾ ಅಲ್ಲದಿರಲಿ ಮಕ್ಕಳನ್ನು ಕದ್ದು ಮುಚ್ಚಿಯೂ ಮಂಡಕ್ಕಿ- ಅವಲಕ್ಕಿ ಭಟ್ಟಿಗಳಲ್ಲಿ ದುಡಿಸಿಕೊಂಡರೆ ಅದು ಶಿಕ್ಷಾರ್ಹ ಅಪರಾಧ. ಇನ್ನು ಮಕ್ಕಳನ್ನು ಇಲ್ಲಿ ದುಡಿಮೆಗೆ ಇಟ್ಟುಕೊಂಡರೆ ಕಾನೂನು ಕ್ರಮ ನಿಶ್ಚಿತ. ಕೆಲಸಗಾರರ ಕೊರತೆ ನೆಪ ಹೇಳಿ, ಶಾಲೆ-ಕಾಲೇಜಿನಲ್ಲಿ ಕಲಿಯಬೇಕಾದ 18 ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಇಲ್ಲದಂತೆ ಮಾಡುವುದು, ಉತ್ತಮ ಆರೋಗ್ಯ, ಸಾಮಾಜಿಕ ಬೆಳವಣಿಗೆ, ಶೈಕ್ಷಣಿಕ ಪ್ರಗತಿ ಕಡೆಗಣಿಸುವುದು ಸಹ ತಪ್ಪು. ದೈಹಿಕ ಆರೋಗ್ಯ ಕ್ಷೀಣಿಸುವುದರಿಂದ ಮತ್ತು ಬೇಗನೆ ಮದುವೆ ಮಾಡುವುದರಿಂದ ಕಲುಷಿತ ವಾತಾವರಣಗಳ ಮಧ್ಯೆ ವಯಸ್ಕರಾಗುತ್ತಿದ್ದಂತೆ ಮಕ್ಕಳು ಸಾವಿನ ಕೂಪಕ್ಕೆ ಸಿಲುಕುತ್ತಾರೆ. ಹೆಚ್ಚಿನ ಹೆಣ್ಣುಮಕ್ಕಳು ವಿಧವೆಯರಾಗಿ ನಿಕೃಷ್ಟ ಜೀವನ ನಡೆಸಬೇಕಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.

ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ರೆಜಿ ಜೇಕರ್ ಮಾತನಾಡಿ, ಸರ್ಕಾರ ಮಕ್ಕಳ ಶಾಲಾ ಖಾತರಿ ಗಟ್ಟಿಗೊಳಿಸಲು ಅನೇಕ ಸೌಲಭ್ಯ, ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ತಂದಿದೆ. ಮಕ್ಕಳು ಭಟ್ಟಿಗಳ ಕಲುಷಿತ ವಾತಾವರಣದಿಂದ ಮುಕ್ತಿ ಹೊಂದಲು ಇಲ್ಲಿನ ಮಕ್ಕಳನ್ನು ವಸತಿ ನಿಲಯಗಳಿಗೆ ಸೇರಿಸುವ ಪ್ರಯತ್ನ ಸರ್ಕಾರದಿಂದ ಆಗಬೇಕು ಎಂದರು.

ಸಂಸ್ಥೆಯ ಸಂಯೋಜಕ ಬಿ.ಮಂಜಪ್ಪ ಮಾತನಾಡಿ, ಬಾಷಾ ನಗರ ವ್ಯಾಪ್ತಿಯ ಮಂಡಕ್ಕಿ ಮತ್ತು ಅವಲಕ್ಕಿ ಭಟ್ಟಿಗಳ ಪ್ರದೇಶಗಳ ಎಲ್ಲ ಸರ್ಕಾರಿ ಇಲಾಖೆಗಳ ಸ್ಥಳೀಯ ಅಧಿಕಾರಿಗಳು, ಸಂಘ-ಸಂಸ್ಥೆ, ಸಂಘಟನೆಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಆಗಾಗ ಮೌಲ್ಯ ಮಾಪನ ಮಾಡುವ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಡಾನ್ ಬಾಸ್ಕೋ ನಿರ್ದೇಶಕರಾದ ಈ.ಪ್ರಸನ್ನಕುಮಾರ, ಎಚ್.ಸುನೀಲ್. ಬಿ.ಶ್ರೀನಿವಾಸ, ಕೆ.ಎನ್.ದಿನೇಶ, ಎಂ.ಸಿ.ಆಶಾ, ರೂಪಾ, ಆಶಿಶ್, ನಾಗರಾಜ, ಹೊನ್ನಪ್ಪ, ಹೀರಾನಾಯ್ಕ, ವಸಂತ ಕುಮಾರ ಸೇರಿದಂತೆ ಸ್ಥಳೀಯ ಮುಖಂಡರು, ಭಟ್ಟಿ ಮಾಲೀಕರು, ಕೆಲಸಗಾರರು ಇದ್ದರು.

ಭಟ್ಟಿಗಳಿಗೆ ಸ್ಟಿಕ್ಕರ್ ಅಂಟಿಸಿ, ಕರಪತ್ರ ನೀಡಿ, ಎಚ್ಚರಿಕೆ, ಅರಿವು ಮೂಡಿಸಲಾಯಿತು. ಸುಮಾರು 200ಕ್ಕೂ ಹೆಚ್ಚು ಅವಲಕ್ಕಿ ಮತ್ತು ಮಂಡಕ್ಕಿ ಭಟ್ಟಿಗಳಿಗೆ ಭೇಟಿ ನೀಡಲಾಯಿತು. 400ಕ್ಕೂ ಹೆಚ್ಚು ಜನರಿಗೆ ಕರಪತ್ರ ನೀಡಿ, ಅರಿವು ಮೂಡಿಸಲಾಯಿತು.

- - -

(ಕೋಟ್‌-1) ಅವಲಕ್ಕಿ ಭಟ್ಟಿಗಳಲ್ಲಿ ಮಕ್ಕಳ ದುಡಿಮೆಯನ್ನು ಕಡಿಮೆಗೊಳಿಸಲು ನಾವು ಶ್ರಮಿಸುತ್ತೇವೆ. ಈ ಭಾಗದ ಬಡವರನ್ನು ಗುರುತಿಸಿ, ಅಂತಹವರ ಆರ್ಥಿಕ ಸುಧಾರಣೆಗೆ ಸರ್ಕಾರದ ಅನೇಕ ಯೋಜನೆಗಳು ತಲುಪುವಂತೆ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

- ಎನ್.ಕೆ. ಇಸ್ಮಾಯಿಲ್‌, ಅಧ್ಯಕ್ಷ, ಅವಲಕ್ಕಿ ಉತ್ಪಾದಕರ ಸಂಘ.

- - -

(ಕೋಟ್‌-2)

ಪ್ರತಿ ವಾರ ಸಂಘದಿಂದ ಆಟೋ ರಿಕ್ಷಾ ಮೂಲಕ ಮಕ್ಕಳನ್ನು ದುಡಿಮೆಗೆ ಕಳಿಸದಂತೆ ಎಚ್ಚರಿಸಲಾಗುತ್ತಿದೆ. ಇನ್ನೂ ಹೆಚ್ಚು ಅರಿವು ಮೂಡಿಸುವ ಮೂಲಕ ಮಂಡಕ್ಕಿ-ಅವಲಕ್ಕಿ ಭಟ್ಟಿಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳದೇ, ಮಕ್ಕಳ ಸ್ನೇಹಿ ಪ್ರದೇಶಗಳನ್ನಾಗಿ ಬದಲಾಯಿಸಲು ಎರಡೂ ಸಂಘದವರು ಪ್ರಯತ್ನಿಸುತ್ತೇವೆ.

- ಅಕ್ಬರ್ ಅಲಿ, ಅಧ್ಯಕ್ಷ, ಮಂಡಕ್ಕಿ ಉತ್ಪಾದಕರ ಸಂಘ.

- - -

-17ಕೆಡಿವಿಜಿ3: ದಾವಣಗೆರೆ ಬಾಷಾ ನಗರದ ಮಂಡಕ್ಕಿ- ಅವಲಕ್ಕಿ ಭಟ್ಟಿಗಳ ಪ್ರದೇಶದಲ್ಲಿ ಮಕ್ಕಳನ್ನು ದುಡಿಮೆಗೆ ಇಟ್ಟುಕೊಳ್ಳದಂತೆ ಅರಿವು ಮೂಡಿಸುವ ಕಾರ್ಯಕ್ಕೆ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಚಾಲನೆ ನೀಡಿದರು.