ಸಾರಾಂಶ
ಕಾನೂನು ಅರಿವು ಕಾರ್ಯಕ್ರಮ । ಪೋಕ್ಸೋ ಕಾಯಿದೆ ಕುರಿತು ಮಾಹಿತಿ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಒಂದು ಮಗುವಿನ ಮೇಲೆ ಊರು, ರಸ್ತೆ, ಗಲ್ಲಿ ಅಥವಾ ಇನ್ಯಾವುದೇ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ನಡೆದ ಬಗ್ಗೆ ತಿಳಿದು ಬಂದಲ್ಲಿ, ಆ ವಿಷಯವನ್ನು ಕಡ್ಡಾಯವಾಗಿ ವರದಿ ಮಾಡಬೇಕಾದ್ದು ನಮ್ಮ ಜವಾಬ್ದಾರಿ, ಆದರೆ ಕಂಡೂ ಕಾಣದಂತೆ ಇದ್ದ ಪಕ್ಷದಲ್ಲಿ ೬ ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರವೀಣ್ ಆರ್.ಜೆ.ಎಸ್. ತಿಳಿಸಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಪೋಕ್ಸೋ ಕಾಯಿದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಗಂಡು, ಹೆಣ್ಣು ಎಂಬ ಲಿಂಗ ತಾರತಮ್ಯವಿಲ್ಲದೆ ೧೮ ವರ್ಷದ ಒಳಗಿನ ಮಗುವಿಗೆ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ನಡೆದಲ್ಲಿ ಪೋಸ್ಕೊ ಕಾಯ್ದೆಯಡಿ ಜಾಮೀನು ಇಲ್ಲದ ಪ್ರಕರಣ ದಾಖಲಾಗುತ್ತದೆ. ಒಂದು ವರ್ಷದ ಒಳಗೆ ಅತ್ಯಂತ ತ್ವರಿತವಾಗಿ ಪೋಕ್ಸೋ ಪ್ರಕರಣಗಳು ಇತ್ಯಾರ್ಥವಾಗಬೇಕು ಮತ್ತು ಒಂದು ಮಗು ತೊಂದರೆಗೆ ಉಂಟಾದಲ್ಲಿ ಅತ್ಯಂತ ಸಂವೇದನಾಶೀಲತೆಯಿಂದ ಮಾಹಿತಿ ಪಡೆಯಬೇಕು ಎಂದು ಕಾಯ್ದೆಯಲ್ಲಿದೆ’ ಎಂದು ತಿಳಿಸಿದರು.‘ಸೋಸಿಯಲ್ ಮೀಡಿಯಾ ಎಂಬುದು ಸರ್ಕಸ್ ಇದ್ದಂತೆ, ಅದನ್ನು ನೋಡಿ ಸಂತೋಷ ಪಡಬೇಕಷ್ಟೆ, ನೀವು ಅದರಲ್ಲಿ ಭಾಗಿಯಾದಲ್ಲಿ, ಸರ್ಕಸ್‌ನಲ್ಲಿ ನೀವು ಒಂದು ಪ್ರಾಣಿಯಾಗುತ್ತೀರಿ. ನಿಮ್ಮ ಒಂದು ಕಾಮೆಂಟ್ ಹಾಗೂ ಇತರೆ ವಿಷಯಗಳ ಕುರಿತು ಸೈಬರ್ ಪೊಲೀಸರು ಪರಿಶೀಲನೆ ನಡೆಸುತ್ತಿರುತ್ತಾರೆ, ಆ ಸಂದರ್ಭದಲ್ಲಿ ಬಾಲಕಿ ಅಥವಾ ಬಾಲಕನ ಕುರಿತು ಕಾಮೆಂಟ್ ಮಾಡಿದ್ದಲ್ಲಿ, ನಿಮ್ಮ ಜತೆಗೆ ಪೋಷಕರು ಹಾಗೂ ಶಾಲೆಯ ಶಿಕ್ಷಕರೂ ಸಹ ಉತ್ತರಿಸಬೇಕಾಗುತ್ತದೆ. ೧೮ ವರ್ಷದೊಳಗಿನ ಹುಡುಗ ಹಾಗೂ ಹುಡುಗಿ ಒಪ್ಪಿದ್ದರೂ ಸಹ ಪೋಕ್ಸೋ ಕಾಯಿದೆಯಲ್ಲಿ ಅಪರಾಧವಾಗುತ್ತದೆ. ಆದ್ದರಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಕಲಿಕೆಯ ವಯಸ್ಸಿನ ಈ ಸುವರ್ಣ ಅವಕಾಶದ ಅವಧಿಯಲ್ಲಿ ಭವ್ಯ ಭಾರತದ ಸತ್ಪ್ರಜೆಗಳಾದ ನೀವು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಚನ್ನಕೇಶವ, ತಾಲೂ ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಇತರ ಅಧಿಕಾರಿಗಳು, ಶಿಕ್ಷಕರು, ಸಮಿತಿ, ಸಂಘದ ಸದಸ್ಯರು, ಇತರರು ಇದ್ದರು.