ಸಾರಾಂಶ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಶಿಕ್ಷಕಿಯೊಬ್ಬರು ಹೋಂ ವರ್ಕ್ ಮಾಡದ ವಿದ್ಯಾರ್ಥಿನಿಯರಿಗೆ ಭಸ್ಕಿ ಹೊಡೆಸಿದ ಪರಿಣಾಮ ಒಂಬತ್ತು ವಿದ್ಯಾರ್ಥಿನಿಯರು ಎರಡು ದಿನಗಳು ನರಳಾಡಿ ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದಲ್ಲಿ ನಡೆದಿದೆ.ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯೊಬ್ಬರು ಒಂಬತ್ತನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ವರ್ಕ್) ನೀಡಿದ್ದು, ಆ ಕೆಲಸವನ್ನು ವಿದ್ಯಾರ್ಥಿಗಳು ಮಾಡದ ಕಾರಣ ಸೋಮವಾರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ೨೫೦ ಭಸ್ಕಿ ಹೊಡಿರಿ ಎಂದು ಶಿಕ್ಷೆ ನೀಡಿದ್ದಾರೆ. ೬೦ ಭಸ್ಕಿ ಹೊಡೆಯುವಾಗಲೇ ಐವರು ವಿದ್ಯಾರ್ಥಿನಿಯರು ತಲೆ ತಿರುಗಿ ಬಿದ್ದಿದ್ದಾರೆ. ಆದರೂ ಆ ಶಿಕ್ಷಕಿ ತನ್ನ ಶಿಕ್ಷೆ ಮುಂದುವರಿಸಿದ್ದು, ಭಸ್ಕಿ ಮುಂದುವರಿಸಿದ್ದಾರೆ. ಉಳಿದ ವಿದ್ಯಾರ್ಥಿನಿಯರೂ ೨೫೦ ಭಸ್ಕಿ ಹೊಡೆದು ಹಾಗೇ ಮಲಗಿದ್ದಾರೆ. ಹೇಗೋ ಚೇತರಿಸಿಕೊಂಡು ಶಾಲೆಯಿಂದ ಮನೆಗೆ ತೆರಳಿದ್ದಾರೆ.
ಭಸ್ಕಿ ಹೊಡೆದ ಕೆಲ ವಿದ್ಯಾರ್ಥಿನಿಯರ ಎರಡೂ ಕಾಲಿನ ತೊಡೆ, ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಂಡು ರಾತ್ರಿಯೆಲ್ಲಾ ನರಳಿದ್ದಾರೆ, ರಾತ್ರಿ ಊಟ ಬಿಟ್ಟು ನೋವು ಅನುಭವಿಸಿದ್ದಾರೆ. ವಿದ್ಯಾರ್ಥಿನಿಯರನ್ನು ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಚಿಕಿತ್ಸೆಗೆ ಕರೆತಂದಾಗ ಘಟನೆ ಬಯಲಾಗಿದೆ.ಘಟನೆ ಹರಡುತ್ತಲೇ ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು ಆಸ್ಪತ್ರೆಗೆ ಧಾವಿಸಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ಭಸ್ಕಿ ಹೊಡೆಸಿದ ಶಿಕ್ಷಕಿಗೂ ಆರೋಗ್ಯ ಸರಿಯಿಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಹನುಮಂತಪ್ಪ ತಿಳಿಸಿದರು. ಶಿಕ್ಷಕಿಯನ್ನು ತಕ್ಷಣವೇ ಬೇರೆಡೆ ವರ್ಗ ಮಾಡಿ ಎಂದು ಎಸ್ಡಿಎಂಸಿ ಅಧ್ಯಕ್ಷ ಅಂಜಿನಪ್ಪ ಒತ್ತಾಯಿಸಿದರು.