ಕನ್ನಡ ಸಾರಸ್ವತ ಲೋಕಕ್ಕೆ ದಾಸಶ್ರೇಷ್ಠ ಪುರಂದರ ದಾಸರ ಕೊಡುಗೆ ಅನನ್ಯ.
ಹೊಸಪೇಟೆ: ಪುರಂದರ ದಾಸರ ಪದ, ಪದ್ಯ, ಸುಳಾದಿಗಳು ಸರ್ವಕಾಲಕ್ಕೂ ಮಾನ್ಯವಾಗಿವೆ ಎಂದು ಬೆಂಗಳೂರಿನ ಪಂಡಿತ್ ಶ್ರೀನಿಧಿ ಆಚಾರ್ಯ ಹೇಳಿದರು.
ಹಂಪಿ ಪುರಂದರ ದಾಸರ ಮಂಟಪದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ಗುರುಸಾರ್ವಭೌಮರ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪುರಂದರ ದಾಸರ ಮಧ್ಯಾರಾಧನೆ ನಿಮಿತ್ತ ಪುರಂದರ ಪದ, ಪದ್ಯ ಸುಳಾದಿಗಳಲ್ಲಿ ಮಾನವೀಯ ಮೌಲ್ಯಗಳು ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ದಾಸಶ್ರೇಷ್ಠ ಪುರಂದರ ದಾಸರ ಕೊಡುಗೆ ಅನನ್ಯ. ಸುಬುಧೇಂದ್ರ ತೀರ್ಥರ ಆದೇಶದಂತೆ ಪ್ರತಿ ವರ್ಷದಂತೆ ಪುರಂದರ ದಾಸರ ಆರಾಧನೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಹಲವಾರು ಭಜನಾ ಸದಸ್ಯರು ಭಾಗವಹಿಸಿ ವಿಶೇಷ ಭಜನೆ, ಕೀರ್ತನೆಗಳನ್ನು ಸಮರ್ಪಿಸುವ ಮೂಲಕ ದಾಸರ ಆರಾಧನೆ ವಿಶಿಷ್ಟವಾಗಿ ನೆರವೇರಿಸಲಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡಿ, ಪುರಂದರದಾಸರು ನವಕೋಟಿ ನಾರಾಯಣರಾಗಿದ್ದರು. ಎಲ್ಲ ಸಂಪತ್ತು ಪರಿತ್ಯಾಗ ಮಾಡಿ ದಾಸತ್ವವನ್ನು ಸ್ವೀಕರಿಸಿದ ಮಹಾನ್ ಜ್ಞಾನಿಗಳಾಗಿದ್ದಾರೆ ಎಂದರು.ತಹಸೀಲ್ದಾರ್ ಶ್ರುತಿ, ಕಮಲಾಪುರ ಸಭೆ ಮುಖ್ಯಾಧಿಕಾರಿ ಈರಣ್ಣ, ರಾಯರ ಮಠದ ಮಠಾಧಿಕಾರಿ ಪವಾನಾಚಾರ್ಯ, ಹರಿದಾಸ ಸೇವಕರಾದ ಗುರುರಾಜ್ ಕುಲಕರ್ಣಿ, ನರಸಿಂಹ ಆಚಾರ್ಯ, ಟೀಕಾಚಾರ್ಯ, ಮಂತ್ರಾಲಯ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಸಂಚಾಲಕ ಅನಂತ ಪದ್ಮನಾಭ ಮತ್ತಿತರರಿದ್ದರು.
ಮಧ್ಯಾರಾಧನೆ ಪ್ರಯುಕ್ತ ಭವ್ಯ ಶೋಭಾಯಾತ್ರೆ ನಡೆಯಿತು. ಬೆಳಗ್ಗೆ ಫಲ ಪಂಚಾಮೃತಾಭಿಷೇಕ, ಪುಷ್ಪ, ವಸ್ತ್ರ ಅಲಂಕಾರ, ಅರ್ಚನೆ, ನೈವೇದ್ಯ ನೆರವೇರಿಸಿ ಮಹಾಮಂಗಳರಾತಿ ನಡೆಸಲಾಯಿತು.ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ಮಂಡಳಿ ಸದಸ್ಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ಸ್ವಸ್ತಿವಾಚನ, ಮಹಾಮಂಗಳರಾತಿ, ಭಜನೆ ನಡೆಯಿತು.
ಹಂಪಿ ಪುರಂದರ ದಾಸರ ಮಂಟಪದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ಗುರುಸಾರ್ವಭೌಮರ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಭಾನುವಾರ ಭವ್ಯ ಶೋಭಾಯಾತ್ರೆ ನಡೆಯಿತು.