ಮುಂಗಾರು ಆರಂಭಕ್ಕೂ ಮುನ್ನ ರೈತರಿಂದ ಎತ್ತುಗಳ ಖರೀದಿ

| Published : May 22 2024, 12:53 AM IST

ಮುಂಗಾರು ಆರಂಭಕ್ಕೂ ಮುನ್ನ ರೈತರಿಂದ ಎತ್ತುಗಳ ಖರೀದಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಬಿತ್ತನೆ ಪೂರ್ವದಲ್ಲಿ ರೈತರು ಹೊಲ ಹಸನುಗೊಳಿಸಿ, ಬಿತ್ತನೆಗೆ ಸಿದ್ಧತೆ ಮಾಡುತ್ತಿದ್ದಾರೆ

ಮಹೇಶ ಛಬ್ಬಿ ಗದಗ

ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರು ಎತ್ತು ಖರೀದಿಸಲು ಮುಂದಾಗುತ್ತಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಎತ್ತುಗಳ ಸಂತೆಯಲ್ಲಿ ಎತ್ತು, ಎಮ್ಮೆ, ಆಕಳುಗಳ ಖರೀದಿ ಭರಾಟೆ ಜೋರಾಗಿತ್ತು.

ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಬೇಸಿಗೆಗೂ ಮನ್ನ ಬಂದ ಬೆಲೆಗೆ ರೈತರು ಜಾನುವಾರಗಳನ್ನು ಮಾರಾಟ ಮಾಡಿದ್ದರು. ಪ್ರತಿ ವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಮೇವಿನ ಕೊರತೆ ಉಂಟಾಗುತ್ತಿದೆ. ಜಾನುವಾರು ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಎತ್ತು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೃಷಿ ಚಟುವಟಿಕೆಗೆ ಎತ್ತು ಇದ್ದರೆ ಅನುಕೂಲ. ಸದ್ಯ ಎತ್ತುಗಳ ಬೇಡಿಕೆ ಹೆಚ್ಚಿದ್ದರಿಂದ ₹1ರಿಂದ ₹1.5 ಲಕ್ಷದ ವರೆಗೂ ಎತ್ತುಗಳು ಮಾರಾಟವಾದವು.

ಮುಂಗಾರು ಬಿತ್ತನೆ ಪೂರ್ವದಲ್ಲಿ ರೈತರು ಹೊಲ ಹಸನುಗೊಳಿಸಿ, ಬಿತ್ತನೆಗೆ ಸಿದ್ಧತೆ ಮಾಡುತ್ತಿದ್ದಾರೆ. ಹೊಲವನ್ನು ಹರುಗಿ, ರಂಟೆ (ನೇಗಿಲು) ಹೊಡೆದ ಹೊಲಗಳಲ್ಲಿ ಹೆಂಟೆಗಳು ಅಲ್ಪ ಮಳೆಗೆ ಕರಗಿದ್ದು, ಬೀಜ ಬಿತ್ತನೆಗೆ ಟ್ರ್ಯಾಕ್ಟರ್, ಎತ್ತುಗಳ ಮೂಲಕ ಹೊಲ ಹದಗೊಳಿಸುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.

ಸದ್ಯ ಮುಂಗಾರು ಪ್ರಾರಂಭವಾಗಲಿದ್ದು, ಕೃಷಿ ಚಟುವಟಿಕೆ ಚುರುಕಾಗುತ್ತಿದೆ. ಎತ್ತುಗಳಿಂದ ಮಾಡಿದ ಕೃಷಿ ಹಸನಾಗುತ್ತದೆ ಎಂಬ ರೈತರ ನಂಬಿಕೆ. ರೈತರು ಗದಗ ನಗರದ ಎಪಿಎಂಸಿ ದನ ಮಾರುಕಟ್ಟೆಗೆ ಶನಿವಾರ ಆಗಮಿಸಿ, ಎತ್ತು, ಹಸು, ಎಮ್ಮೆಗಳನ್ನು ಖರೀದಿಸಿದರು.

ದಲ್ಲಾಳಿಗಳ ಹಾವಳಿಗೆ ಬೇಸತ್ತ ರೈತರು: ಗ್ರಾಮೀಣ ಭಾಗದ ರೈತರು ಎತ್ತುಗಳನ್ನು ಮಾರಾಟ ಮಾಡಲು ಅಥವಾ ಕೊಳ್ಳಲು ಎತ್ತಿನ ಮಾರುಕಟ್ಟೆಗೆ ಬಂದ ರೈತರಿಗೆ ನೇರವಾಗಿ ವ್ಯವಹಾರ ಮಾಡಲು ಕಷ್ಟಸಾಧ್ಯ. ದಲ್ಲಾಳಿಗಳ ಪಾಲ್ಗೊಳ್ಳುವಿಕೆ ಇಲ್ಲದೆ ವ್ಯಾಪಾರ ನಡೆಯುವುದೇ ಇಲ್ಲ. ಇಬ್ಬರು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡುವ ದಲ್ಲಾಳಿಗಳು ವಸ್ತ್ರದಲ್ಲಿ ಕೈ ಬೆರಳನ್ನು ಮುಟ್ಟಿ ದರ ನಿಗದಿಪಡಿಸುತ್ತಾರೆ. ಯಾವ ಬೆಲೆಗೆ ಜಾನುವಾರಗಳ ವ್ಯಾಪಾರ ಮುಗಿಯುತು ಎನ್ನುವುದು ತಿಳಿಯದೇ ದಲ್ಲಾಳಿಗಳು ಹೇಳುವ ದರಕ್ಕೆ ರೈತರು ಕೊಟ್ಟು ಜಾನುವಾರಗಳನ್ನು ಖರೀದಿಸಬೇಕು. ಇದರಿಂದ ಎಷ್ಟೋ ರೈತರಿಗೆ ನಷ್ಟವಾಗುತ್ತದೆ. ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಕೃಷಿ ಇಲಾಖೆಯ ಬೀಜ ವಿತರಣೆ ಯೋಜನೆಯಡಿ ರೈತರ ಹಿಡುವಳಿ ಅನ್ವಯ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಈಗಾಗಲೇ ಸಿದ್ಧತೆ ಕೈಗೊಂಡಿದೆ. ಬೀಜ, ಗೊಬ್ಬರ ಕೊರತೆಯಾಗದಂತೆ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ. ಪ್ರಸಕ್ತ ವರ್ಷ ಉತ್ತಮ ಮುಂಗಾರು ನಿರೀಕ್ಷೆ ಇದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಮಲ್ಲಯ್ಯ ಕೊರಗಣ್ಣವರ ಹೇಳಿದರು.

ಮುಂಗಾರು ಶೀಘ್ರ ಪ್ರಾರಂಭವಾಗುವ ನಿರೀಕ್ಷೆ ಇದ್ದು, ಸದ್ಯ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮುಂಗಾರು ಬೀಜ ಬಿತ್ತನೆಗಾಗಿ ಹೊಲ ಹಸನಗೊಳಿಸುತ್ತಿದ್ದು, ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರವನ್ನು ಕೃಷಿ ಇಲಾಖೆ ಸಮಯಕ್ಕೆ ಸರಿಯಾಗಿ ಪೂರೈಸಿದರೆ ರೈತರಿಗೆ ಅನುಕೂಲಕರವಾಗುತ್ತದೆ ಎಂದು ರೈತ ಸಮುದಾಯದವರು ಹೇಳಿದರು.