ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ : ಮೀನಾ ನಾಗರಾಜ್‌

| Published : Feb 05 2025, 12:33 AM IST

ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ : ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‌ಗೆ ₹5,650 ರಂತೆ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

- ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ

---

- ಪ್ರತಿ ಕ್ವಿಂಟಾಲ್‌ಗೆ 5,650 ರು.ರಂತೆ ಖರೀದಿ

- ಅಗತ್ಯ ದಾಖಲೆಗಳೊಂದಿಗೆ ನೋಂದಣಿ

- ರೈತರ ನೋಂದಣಿ ಕಾಲಾವಧಿ ಏ. 22 ರವರೆಗೆ ನಿಗಧಿ

- ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ

- ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‌ಗೆ ₹5,650 ರಂತೆ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಆದೇಶ ಹೊರಡಿಸಿದ ದಿನದಿಂದ ಖರೀದಿ ಕೇಂದ್ರಗಳಲ್ಲಿ ರೈತರ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಲಾಗುವುದು. ರೈತರ ನೋಂದಣಿ ಕಾಲಾವಧಿಯನ್ನು ಏಪ್ರಿಲ್‌ 22 ರವರೆಗೆ ನಿಗಧಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕಡಲೆಕಾಳು ಉತ್ಪನ್ನಗಳನ್ನು ಖರೀದಿಸಲಾಗುವುದು ಎಂದರು.

ಕಡಲೆಕಾಳು ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳು ಉತ್ಪನ್ನವನ್ನು ಸರ್ಕಾರದ ಬೆಂಬಲ ಬೆಲೆಯಂತೆ ಪ್ರತಿ ಕ್ವಿಂಟಾಲ್‌ಗೆ ₹5,650 ರಂತೆ ಖರೀದಿಸಲಾಗುವುದು ಎಂದು ಹೇಳಿದರು.ಖರೀದಿಸಲು ಅಗತ್ಯ ದಾಖಲೆ

ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ನೋಂದಣಿಗೆ ತಮ್ಮ ಆಧಾರ್ ಗುರುತಿನ ಚೀಟಿ ನಕಲು ಪ್ರತಿ, ಪಹಣಿಯಲ್ಲಿರುವ ಹೆಸರಿನ ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಕಡಲೆಕಾಳು ಉತ್ಪನ್ನ ನಿರ್ಧಿಷ್ಟ ಪಡಿಸಿದ ಎಫ್‌ಎಕ್ಯೂ ಗುಣಮಟ್ಟ ಹೊಂದಿರ ಬೇಕು. ಕಡಲೆಕಾಳು ಚೆನ್ನಾಗಿ ಒಣಗಿಸಬೇಕು. ತೇವಾಂಶ ಶೇ. 14ಕ್ಕಿಂತ ಕಡಿಮೆ ಇರಬೇಕು. ಕಡಲೆಕಾಳು ಉತ್ಪನ್ನ ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು ಎಂದು ತಿಳಿಸಿದ ಅವರು, ಕಡಲೆ ಕಾಳು ಉತ್ಪನ್ನ ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಾಬೇಕು ಎಂದು ಹೇಳಿದರು. ಜಿಲ್ಲೆಯ ಕಡೂರು ಹಾಗೂ ಅಜ್ಜಂಪುರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಖರೀದಿ ಕೇಂದ್ರದ ಅಧಿಕಾರಿಗಳನ್ನು ಅವರ ಮೊ. ಸಂಖ್ಯೆ : 94498 64428, 94492 06938, 96864 66869 ಸಂಪರ್ಕಿಸಿ ಮಾಹಿತಿ ಪಡೆಯುವಂತೆ ತಿಳಿಸಿದ ಅವರು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥರೆಡ್ಡಿ, ಸಹಾಯಕ ಕಾರ್ಯದರ್ಶಿ ಭವ್ಯ, ಕೃಷಿ ಮಾರಾಟ ಮಹಾಮಂಡಳಿ ವ್ಯವಸ್ಥಾಪಕ ಚೇತನ್, ಸಹಕಾರ ಸಂಘಗಳ ನಿಬಂಧಕರ ಕಚೇರಿಯ ತ್ರಿವೇಣಿ ಉಪಸ್ಥಿತರಿದ್ದರು. 4 ಕೆಸಿಕೆಎಂ 4