ಶ್ರಾವಣ ಎಂದರೆ ಶ್ರವಣ ಎಂದರ್ಥ. ಈ ಪವಿತ್ರ ಮಾಸದಲ್ಲಿ ಬೆಳಗ್ಗೆ ದೇವರ ಪೂಜೆ ಮಾಡುವ ಮೂಲಕ ದೇಹವನ್ನು ಶುದ್ಧ ಮಾಡಿಕೊಂಡರೆ, ಸಂಜೆ ಪುರಾಣ, ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬಹುದು.
ಹುಬ್ಬಳ್ಳಿ:
ಶ್ರಾವಣ ಎಂದರೆ ಶ್ರವಣ ಎಂದರ್ಥ. ಈ ಪವಿತ್ರ ಮಾಸದಲ್ಲಿ ಬೆಳಗ್ಗೆ ದೇವರ ಪೂಜೆ ಮಾಡುವ ಮೂಲಕ ದೇಹವನ್ನು ಶುದ್ಧ ಮಾಡಿಕೊಂಡರೆ, ಸಂಜೆ ಪುರಾಣ, ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬಹುದು ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.ನವನಗರದಲ್ಲಿ ನಿವಾಸಿಗಳ ಸಂಘದ ವತಿಯಿಂದ ಈಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಶ್ರೀಸಿದ್ಧಾರೂಢ ಸ್ವಾಮಿ ಮಹಾತ್ಮೆ ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ವರ್ಷವಿಡೀ ಜೀವನದ ಜಂಜಾಟದಲ್ಲಿ ಮುಳುಗಿರುವ ಮನುಷ್ಯನಿಗೆ ನೆಮ್ಮದಿ ಕಂಡುಕೊಳ್ಳುವ ಮಾರ್ಗವನ್ನು ಹಿರಿಯರು ಶ್ರಾವಣ ಮಾಸದ ಆಚರಣೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಮಾಸದಲ್ಲಿ ಧಾರ್ಮಿಕ ಚಿಂತನೆ, ಪುರಾಣ ಶ್ರವಣ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.ಶ್ರಾವಣ ಮಾಸದಲ್ಲಿ ಹಲವು ನಕ್ಷತ್ರಗಳ ಸಂಯೋಗದಿಂದ ಮಂಗಳಕರ ಮಳೆ ಸುರಿದು ಧರೆಗೆ ಸಮೃದ್ಧಿ ನೀಡುತ್ತದೆ. ಅದೇ ರೀತಿ ಮನುಷ್ಯನ ಶ್ರವಣೇಂದ್ರಿಯಗಳಿಗೆ ಯೋಗ್ಯವಾದ ಪಾರಮಾರ್ಥಿಕ ತತ್ತ್ವಧಾರೆಯನ್ನು ಶ್ರವಣ ಮಾಡಿಸುವ ಮಾಸವೂ ಶ್ರಾವಣವಾಗಿದೆ ಎಂದು ಹೇಳಿದರು.
ಅಶುದ್ಧ ಬುದ್ಧಿ ಶುದ್ಧವಾದ ಬಳಿಕ ಗುರುಮುಖದಿಂದ ಉಪನಿಷತ್ ವಾಕ್ಯಗಳನ್ನು ಶ್ರವಣ ಮಾಡುವುದರಿಂದ ಅಪರೋಕ್ಷ ಜ್ಞಾನ ಪ್ರಾಪ್ತಿಯಾಗುತ್ತದೆ. ಇದರಿಂದ ಜೀವನು ತನ್ನ ಪರಮಾತ್ಮ ಸ್ವರೂಪವನ್ನು ಅರಿತುಕೊಳ್ಳುತ್ತಾನೆ. ಬಾನಿನಲ್ಲಿ ನೀಲಿ ಬೆರೆತಂತೆ, ಸಾಗರದಲ್ಲಿ ಜಲಬಿಂದು ಸೇರಿಹೋಗುವಂತೆ ಜೀವನು ಈಶ್ವರನಲ್ಲಿ ಲೀನನಾಗುತ್ತಾನೆ. ಹೀಗೆ ಜೀವ-ಶಿವರ ಐಕ್ಯತ್ವದಿಂದ ದುಃಖ ನಿವೃತ್ತಿಯಾಗಿ ಪರಮಾನಂದ ಪ್ರಾಪ್ತಿಯಾಗುತ್ತದೆ. ಶ್ರವಣದಿಂದಲೇ ಈ ಆಧ್ಯಾತ್ಮಿಕ ಅನುಭೂತಿ ಸಾಧ್ಯವಾಗುವುದರಿಂದ ಶ್ರಾವಣ ಮಾಸದ ‘ಶ್ರವಣ’ ಪದವೇ ಮೋಕ್ಷದಾಯಕವಾಗಿದೆ ಎಂದು ವಿವರಿಸಿದರು.ಅಧ್ಯಕ್ಷ ಬಸವರಾಜ ಪಾಟೀಲ, ಪೂಜಾರಿ ರಾಘವೇಂದ್ರ, ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಗೌರಿ ಮಾತಾ ಮಹಿಳಾ ಮಂಡಳದ ಸದಸ್ಯರು, ಕಾಶಿ ವಿಶ್ವೇಶ್ವರ ರುದ್ರ ಬಳಗದ ಸದಸ್ಯರು, ಸಂಗೀತಗಾರ ಶಾಂತಯ್ಯ ಹಿರೇಮಠ, ತಬಲಾ ಕಲಾವಿದ ಮಂಜುನಾಥ ಬಾರಕೇರ ಸೇರಿದಂತೆ ಭಕ್ತರು ಹಾಗೂ ನಿವಾಸಿಗಳು ಪಾಲ್ಗೊಂಡಿದ್ದರು.