ಪ್ರತಿಯೊಂದು ಮನೆಯಲ್ಲೂ ಸಂಸ್ಕಾರದ ಬೆಳಕು ಮೂಡಬೇಕು. ಪ್ರತಿಯೊಬ್ಬ ಯುವಕರಲ್ಲೂ ಆತ್ಮವಿಶ್ವಾಸ ಬೆಳೆಯಬೇಕು. ಧರ್ಮ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಶಾಂತಿ, ಸೇವೆ ಮತ್ತು ಸತ್ಯದ ರೂಪದಲ್ಲಿ ಕಾಣುವಂತಾಗಬೇಕು. ಧರ್ಮದ ಬೆಳಕು ನಮ್ಮೆಲ್ಲರ ಬದುಕನ್ನು ಪಾವನಗೊಳಿಸುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರತಿಯೊಂದು ಮನೆಯಲ್ಲೂ ಸಂಸ್ಕಾರದ ಬೆಳಕು ಮೂಡಬೇಕು. ಪ್ರತಿಯೊಬ್ಬ ಯುವಕರಲ್ಲೂ ಆತ್ಮವಿಶ್ವಾಸ ಬೆಳೆಯಬೇಕು. ಧರ್ಮ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಶಾಂತಿ, ಸೇವೆ ಮತ್ತು ಸತ್ಯದ ರೂಪದಲ್ಲಿ ಕಾಣುವಂತಾಗಬೇಕು. ಧರ್ಮದ ಬೆಳಕು ನಮ್ಮೆಲ್ಲರ ಬದುಕನ್ನು ಪಾವನಗೊಳಿಸುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು. ನಗರದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 7ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮವೆಂದರೆ ಕೇವಲ ಆಚರಣೆಯಲ್ಲ. ಅದು ಜೀವನದ ನಡವಳಿಕೆಯಾಗಿದೆ. ದೇವಸ್ಥಾನಕ್ಕೆ ಹೋಗುವ ಪೂಜೆ ಮಾಡುವ ಮಂತ್ರ ಪಠಿಸುವ ಆಚರಣೆ ನಾವು ಮಾಡುತ್ತೇವೆ. ಇವೆಲ್ಲವೂ ಭಕ್ತಿಯ ಅಭಿವ್ಯಕ್ತಿಗಳಾಗಿವೆ. ಆದರೆ ಧರ್ಮದ ನಿಜವಾದ ಸೌಂದರ್ಯ ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕು. ಸತ್ಯ ಮಾತನಾಡುವುದು ಧರ್ಮ. ಪರರ ನೋವಿಗೆ ಸ್ಪಂದಿಸುವುದು ಧರ್ಮ. ತಂದೆ ತಾಯಿಗಳನ್ನು ಗುರುಹಿರಿಯರನ್ನು ಗೌರವಿಸುವುದು ಧರ್ಮ. ದುರ್ಬಲರಿಗೆ ಸಹಾಯ ಮಾಡುವದು ಮತ್ತು ತಪ್ಪು ದಾರಿಯಲ್ಲಿ ನಡೆಯುವವನಿಗೆ ಸರಿಯಾದ ದಾರಿ ತೋರಿಸುವುದು ಧರ್ಮ. ಒಬ್ಬ ವ್ಯಕ್ತಿ ದೇವರ ಮುಂದೆ ದೀಪ ಹಚ್ಚಬಹುದು. ಆದರೆ ಆತನು ತಮ್ಮ ಕುಟುಂಬದವರಿಗೆ ನೋವುಂಟು ಮಾಡುತ್ತಾನೆ ಎಂದಾದರೆ ಅದು ಧರ್ಮವಲ್ಲ. ದೇವರ ಮುಂದೆ ಬೆಳಗುವ ದೀಪಕ್ಕಿಂತಲೂ ನಮ್ಮ ಹೃದಯದಲ್ಲಿ ಬೆಳಗುವ ಸತ್ಯದ ದೀಪ ಮುಖ್ಯವಾಗಿದೆ. ಕತ್ತಲೆಯ ಕೋಣೆಯಲ್ಲಿ ಒಂದು ಸಣ್ಣ ದೀಪ ಹಚ್ಚಿದರೆ ಸಾಕು ಬೆಳಕು ಮೂಡುತ್ತದೆ. ಅದರಂತೆ ಮನುಷ್ಯ ಜೀವನದಲ್ಲಿ ಅಜ್ಞಾನ ಕಳೆದು ಜ್ಞಾನ ಬೆಳಕಿನ ಹೆಜ್ಜೆ ಹಾಕಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಮೂಲ್ಯವಾದ ಜೀವನ ದರ್ಶನ ಸಂದೇಶವನ್ನು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದು ಹೇಳಿದರು.

ರಂಭಾಪುರಿ ಜಗದ್ಗುರುಗಳು ನಿರೂಪಿಸಿದ ವಿಚಾರಗಳನ್ನು ಸಿ.ಎಚ್. ಬಾಳನಗೌಡ್ರು ಸಂಗ್ರಹಿಸಿದ ಸುಬೋಧ ಚಿಂತನೆ ಕೃತಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಬಿಡುಗಡೆ ಗೊಳಿಸಿದರು. ವ್ಯಸನದ ಕತ್ತಲೆಯಿಂದ ವಿವೇಕದ ಬೆಳಕಿನೆಡೆಗೆ ವಿಚಾರವಾಗಿ ಶಿವಗಂಗಾ ಕ್ಷೇತ್ರದ ಡಾ. ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಪ್ರಾಸ್ತಾವಿಕವಾಗಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನೇತೃತ್ವ ವಹಿಸಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ, ಸಿಂದಗಿ ಸಾರಂಗ ಗಚ್ಚಿನ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮುತ್ತೂರ ವಿರಕ್ತಮಠದ ಗುರುಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ. ಪಟ್ಟಣಶೆಟ್ಟಿ, ಭಾಗವಹಿಸಿದ್ದರು. ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಉಪಸ್ಥಿತರಿದ್ದರು. ಹುನ್ನೂರಿನ ಬಸಯ್ಯ ಸಿದ್ದಗಿರಿಮಠ ಸ್ವಾಗತಿಸಿದರು. ವೀರೇಶ ಕಿತ್ತೂರ ಗದಗ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ನಿರೂಪಣೆ ಸೇವೆ ಸಲ್ಲಿಸಿದರು.