ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪೂರಿಗಾಲಿ ಹನಿ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಆಧುನಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಅರಿವು ಮೂಡಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಚೊಟ್ಟನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿ, ಹನಿನೀರಾವರಿ ಯೋಜನೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತರು ನೀರು ಬಿಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಾಂಪ್ರದಾಯಿಕ ಬೇಸಾಯಕ್ಕೆ ರೈತರು ಮುಂದಾಗುತ್ತಿದ್ದಾರೆಯೇ ಹೊರತು ಆಧುನಿಕ ಕೃಷಿಯ ಬಗ್ಗೆ ಚಿಂತನೆಯೇ ಇಲ್ಲ. ನೀರಾವರಿ ಹಾಗೂ ಕಂಪನಿಯೂ ಕೂಡ ಪರಿಣಾಮಕಾರಿಯಾಗಿ ರೈತರಿಗೆ ಅರಿವು ಮೂಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಹಕಾರ ಸಂಘದ ನಿರ್ವಹಣೆ ಮೂಲಕ ಏಕಬೆಳೆ ಪದ್ಧತಿ ಮಾಡುವುದು, ಕೃಷಿ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗುವುದು, ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣವಾಗುವುದು ಸೇರಿದಂತೆ ಸಾವಿರಾರು ಯುವಕರಿಗೆ ಉದ್ಯೋಗ ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದರು.ಬಿಜಿ ಪುರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಅಧಿಕಾರಿಗಳು ಹಾಗೂ ಕೃಷಿ ತಜ್ಞರೊಂದಿಗೆ ಸಭೆ ನಡೆಸಿ, ರೈತರಿಗೆ ಸಂಪೂರ್ಣವಾಗಿ ಅರ್ಥವಾಗುವಂತೆ ತಿಳಿವಳಿಕೆ ನೀಡಲಾಗುವುದು, ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅರ್ಥೈಸಿಕೊಂಡು ಸಹಕಾರ ನೀಡಿದರೆ ಮಾತ್ರ ಯೋಜನೆ ಫಲಪ್ರದವಾಗಲಿದೆ ಎಂದು ಹೇಳಿದರು.
ಪೂಲಿಗಾಲಿ ಹನಿ ನೀರಾವರಿ ಯೋಜನೆಯಿಂದ ವ್ಯಾಪ್ತಿಯ 33 ಕೆರೆ- ಕಟ್ಟೆಗಳಿಗೆ ನೀರು ತುಂಬಿಸಲಾಗಿದೆ. ಪೂರಿಗಾಲಿ ಹನಿ ನೀರಾವರಿ ಯೋಜನೆ ಕೇವಲ ಕೆರೆಕಟ್ಟೆಗಳಿಗೆ ನೀರು ತುಂಬಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಆಧುನಿಕ ಕೃಷಿ ಮೂಲಕ ರೈತರ ಬದುಕನ್ನು ಹಸನು ಮಾಡುವುದೇ ನಮ್ಮೆಲ್ಲರ ಆಶಯವಾಗಿದೆ ಎಂದು ತಿಳಿಸಿದರು.ಪ್ರತಿ ವರ್ಷದಂತೆ ಪ್ರಸ್ತುತ ತುಂಬಿರುವ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ. ಸಮೃದ್ಧ ಮಳೆಯಿಂದ ಫಸಲು ಉತ್ತಮವಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಚೆನ್ನಾಗಿ ಮಳೆ ಬೆಳೆಯಾಗಲೆಂದು ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಜಿಪಂ ಮಾಜಿ ಸದಸ್ಯೆ ಸುಷ್ಮಾ ಸಿ.ಪಿ.ರಾಜು, ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಕೆಂಚನದೊಡ್ಡಿ ಕೆ. ರಾಚೇಗೌಡ, ಸದಸ್ಯ ಲೋಕೇಶ್ ಮುಖಂಡರಾದ ಬಂಕ್ ಮಹದೇವು, ರೋಹಿತ್‌ಗೌಡ, ಆನಂದ್, ರವಿ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಎಇಇ ಗೋಪಿನಾಥ್, ಭರತೇಶ್ ಸಹಾಯಕ ಅಭಿಯಂತರ ಅಬ್ದುಲ್ ಜಾವಿದ್, ಜೈನಿ ಇರಿಗೇಷನ್ ಸಂಸ್ಥೆಯ ವಿಶ್ವ ಇಂದರ್ ಸಿಂಗ್, ಪಿ.ವಿ ಜೋಷಿ, ಗುರುದತ್ತ ಸೇರಿದಂತೆ ಇತರರು ಇದ್ದರು.