ಸಾರಾಂಶ
ಗೋಕರ್ಣ:
ಮಕ್ಕಳು ತಮ್ಮ ಇಡೀ ಜೀವನದಲ್ಲಿ ಶುದ್ಧತೆ ಕಳೆದುಕೊಳ್ಳದಂತೆ ಮಾರ್ಗದರ್ಶನ ನೀಡುವುದೇ ನಿಜವಾದ ಶಿಕ್ಷಣ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಭೌಮ ಗುರುಕುಲದ ವಿದ್ಯಾಪರ್ವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಕ್ಕಳು ದೇವರ ಸಮಾನ; ಗಂಗೆಯ ಸಮಾನ. ಗಂಗಾನದಿಯ ಮೂಲವಾದ ಗಂಗೋತ್ರಿ ಅತ್ಯಂತ ಪವಿತ್ರ. ನದಿ ಹರಿದಂತೆಲ್ಲ ನಾವು ಅದನ್ನು ಮಲಿನ ಮಾಡುತ್ತಿದ್ದೇವೆ. ಅಂತೆಯೇ ಮಕ್ಕಳ ಬಾಲ್ಯ ಗಂಗೋತ್ರಿಯಂತೆ ಪರಮ ಪವಿತ್ರ. ಅವರ ಬದುಕನ್ನು ಸಮಾಜ ಮಲಿನಗೊಳಿಸುತ್ತದೆ. ಮಕ್ಕಳು ತಮ್ಮ ಶುದ್ಧತೆ ಹಾಗೂ ಪಾವಿತ್ರ್ಯವನ್ನು ಜೀವನವಿಡೀ ಉಳಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವುದೇ ನಿಜವಾದ ಶಿಕ್ಷಣ ಎಂದು ವಿಶ್ಲೇಷಿಸಿದರು.ದೇವರಂತೆ ಬಾಳುವುದನ್ನು ಕಲಿಸುವುದೇ ವಿದ್ಯೆ. ಬದುಕಿನ ಪಾಪ, ಅಕಾರ್ಯಗಳು ಆತ್ಮಕ್ಕೆ ಅಂಟಿದ ಕಳಂಕವಾಗಿ ಮಾರ್ಪಡುತ್ತವೆ. ಶುದ್ಧತೆ ಮತ್ತು ಮುಗ್ಧತೆ ಬಾಳಿನಲ್ಲಿ ವಿಜೃಂಭಿಸಬೇಕು. ಕೃತ್ರಿಮತೆ ಇರಬಾರದು. ಅಂಥ ಬದುಕನ್ನು ಕಟ್ಟಿಕೊಳ್ಳುವಂತೆ ಶಿಕ್ಷಣ ಪ್ರೇರೇಪಿಸಬೇಕು ಎಂದು ಸೂಚಿಸಿದರು.ಮಕ್ಕಳು ಕಿಡಿ ಇದ್ದಂತೆ. ಅವರು ಭವಿಷ್ಯದಲ್ಲಿ ದೇಶಕ್ಕೆ ಬೆಳಕಾಗುವಂತೆ ಬೆಳೆಸಬೇಕು. ಸರಿಯಾಗಿ ಬೆಳೆಸಿದರೆ ಆ ಕಿಡಿ ಜ್ಞಾನಾಗ್ನಿಯಾಗಬಹುದು. ಹೂವಿನಂತೆ ಇಡೀ ದೇಶಕ್ಕೆ ಪರಿಮಳ ಹರಡಬಹುದು ಎಂದು ಸೂಚ್ಯವಾಗಿ ನುಡಿದರು.ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಸಿ.ಕೆ. ಮಂಜುನಾಥ ಮಾತನಾಡಿ, ೨೦೪೭ರ ವೇಳೆಗೆ ಭಾರತ ವಿಶ್ವಗುರುವಾಗುತ್ತದೆ ಎಂದು ಪ್ರಧಾನಿ ಭವಿಷ್ಯ ನುಡಿದಿದ್ದಾರೆ. ಇಡೀ ವಿಶ್ವವನ್ನು ಬೆಳಗಬಲ್ಲ ನಕ್ಷತ್ರಗಳು ಈ ಗುರುಕುಲದಲ್ಲಿ ವಿಕಾಸವಾಗುತ್ತಿವೆ. ಸಂಸ್ಕಾರ, ಸಂಸ್ಕೃತಿಯುಕ್ತ ಶಿಕ್ಷಣವಷ್ಟೇ ದೇಶವನ್ನು ಬೆಳಗಬಲ್ಲದು ಎಂದು ಅಭಿಪ್ರಾಯಪಟ್ಟರು.ಬಿಇಒ ರಾಜೇಂದ್ರ ಭಟ್ ಮಾತನಾಡಿ, ಶೀಲವಿಲ್ಲದ ಶಿಕ್ಷಣಕ್ಕೆ ಬೆಲೆ ಇಲ್ಲ. ಮಕ್ಕಳಲ್ಲಿ ಸಂಸ್ಕೃತಿ ಬೇಕು. ಅಂಕ ಆಧರಿತ ವ್ಯವಸ್ಥೆಯಿಂದ ಶಿಕ್ಷಣ ಹೊರಬರಬೇಕು. ಸಂಸ್ಕಾರ ಹಾಗೂ ಸಂಸ್ಕೃತಿ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದರು. ವಿದ್ಯಾರ್ಥಿಗಳಿಗೆ ಮೌಲ್ಯ ಕಲಿಸಲು ಸಾಧ್ಯವಿಲ್ಲ. ನೋಡಿ ಕಲಿಯಬೇಕು. ಜ್ಞಾನವನ್ನು ತಿಳಿದುಕೊಳ್ಳುವ ಮಾರ್ಗವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು ನಿಜವಾದ ಶಿಕ್ಷಣ ಎಂದು ಬಣ್ಣಿಸಿದರು.ಸಾರ್ವಭೌಮ ಗುರುಕುಲಂ ಅಧ್ಯಕ್ಷ ಅರುಣ್ ಹೆಗಡೆ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ, ಕಾರ್ಯದರ್ಶಿ ಅಶ್ವಿನಿ ಉಡುಚೆ, ಪಿಯು ವಿಭಾಗದ ಪ್ರಾಚಾರ್ಯರಾದ ಶಶಿಕಲಾ ಕೂರ್ಸೆ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಎಸ್.ಜಿ. ಭಟ್ ಕಬ್ಬಿನಗದ್ದೆ, ಪರಂಪರಾ ಗುರುಕುಲದ ಪ್ರಾಚಾರ್ಯರಾದ ನರಸಿಂಹ ಭಟ್, ಆಡಳಿತ ಮಂಡಳಿ ಸದಸ್ಯರಾದ ಜಿ.ವಿ. ಹೆಗಡೆ, ವೆಂಕಟಗಿರಿ, ಸ್ವಾತಿ ಭಾಗ್ವತ್, ಕೃಷ್ಣಾನಂದ, ಗೀತಾ ಯಾಜಿ, ಶೀಲಾ ಹೊಸ್ಮನೆ, ಗಣೇಶ ಜೋಶಿ ಮತ್ತಿತರರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ಮೂಡಿಬಂದ ಹಸ್ತಪ್ರತಿ ವಿದ್ಯಾವಿಕಾಸವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳ ಸೃಜನಶೀಲ ಕಲೆ ಬಿಂಬಿಸುವ ಪ್ರದರ್ಶಿನೀ ಗಮನ ಸೆಳೆಯಿತು. ಶಿಕ್ಷಕರು ಮತ್ತು ಸಿಬ್ಬಂದಿ, ಪೋಷಕರು ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.