ಸಾಹಿತ್ಯ ಸಮ್ಮೇಳನದ ರಥಯಾತ್ರೆಗೆ ಪೂರ್ಣಕುಂಭ ಸ್ವಾಗತ

| Published : Nov 10 2024, 01:49 AM IST

ಸಾರಾಂಶ

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. 3ನೇ ಬಾರಿ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಮ್ಮೇಳನವನ್ನು ತಾಲೂಕಿನ ಜನರು ಮನೆ ಹಬ್ಬದಂತೆ ಸಂಭ್ರಮಿಸಿ ಸ್ವ ಇಚ್ಛೆಯಿಂದ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 3 ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ಸಮ್ಮೇಳನ ರಥಯಾತ್ರೆಗೆ ತಾಲೂಕಿನ ಗಡಿಭಾಗ ಮಣ್ಣಹಳ್ಳಿಯಲ್ಲಿ ಶನಿವಾರ ತಾಲೂಕು ಆಡಳಿತ ಮತ್ತು ಕಸಾಪದಿಂದ ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.

ಗ್ರಾಮಕ್ಕೆ ಆಗಮಿಸಿದ ರಥಯಾತ್ರೆಗೆ ಪೂಜೆ ಸಲ್ಲಿಸಿದ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್ ಅವರಿಗೆ ಮಂಡ್ಯ ತಾಲೂಕು ಕಸಾಪ ಪದಾಧಿಕಾರಿಗಳು ಕನ್ನಡ ಬಾವುಟ ಹಸ್ತಾಂತರಿಸುವ ಮೂಲಕ ರಥಯಾತ್ರೆಯನ್ನು ಬೀಳ್ಕೊಟ್ಟರು.

ಬಳಿಕ ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿ ರಥಯಾತ್ರೆಯನ್ನು ಬರಮಾಡಿಕೊಳ್ಳುತ್ತಿದ್ದಂತೆ ಶಾಲಾ ಮಕ್ಕಳ ಬ್ಯಾಂಡ್‌ ಸೆಟ್‌ನೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ರಥ ಸಂಚರಿಸಿತು.

ಈ ವೇಳೆ ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಹಲವು ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ತಾಪಂ ಇಒ ಸತೀಶ್ ಮಾತನಾಡಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. 3ನೇ ಬಾರಿ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಮ್ಮೇಳನವನ್ನು ತಾಲೂಕಿನ ಜನರು ಮನೆ ಹಬ್ಬದಂತೆ ಸಂಭ್ರಮಿಸಿ ಸ್ವ ಇಚ್ಛೆಯಿಂದ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಖರಡ್ಯ ಬಸವೇಗೌಡ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಆರ್.ರವಿ, ಸದಸ್ಯ ಸಿದ್ದರಾಮು, ಪಿಡಿಒ ಸೈಯದ್ ಇಮ್ರಾನ್‌ ಅಲಿ, ಅಂಗನವಾಡಿ ಕಾರ್ಯಕರ್ತೆ ಕವಿತ, ಗ್ರಂಥಾಲಯ ಮೇಲ್ವಿಚಾರಕಿ ಮಂಗಳಮ್ಮ ಸೇರಿದಂತೆ ಹಲವರು ಇದ್ದರು.

ಬಳಿಕ ಬ್ರಹ್ಮದೇವರಹಳ್ಳಿ ಗ್ರಾಮಕ್ಕೆ ಪ್ರವೇಶಿಸಿದ ರಥಯಾತ್ರೆಗೆ ಗ್ರಾಪಂ ಅಧ್ಯಕ್ಷೆ ಶಿವಮ್ಮ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರೆ, ಶಾಲಾ ಮಕ್ಕಳು ಬ್ಯಾಂಡ್‌ಸೆಟ್ ಸಹಿತ ರಥದೊಂದಿಗೆ ಹೆಜ್ಜೆಹಾಕಿದರು. ಗ್ರಾಪಂ ಸದಸ್ಯ ಕೊಣನೂರು ರವಿ, ಪಿಡಿಒ ಶಿವಲಿಂಗೇಗೌಡ, ಮುಖಂಡರಾದ ಮಹದೇವು, ಹರೀಶ್ ಸೇರಿದಂತೆ ಹಲವರಿದ್ದರು.

ನಂತರ ಹೊಣಕೆರೆ ಗ್ರಾಮಕ್ಕೆ ಆಗಮಿಸಿದ ರಥಯಾತ್ರೆಗೆ ಗ್ರಾಪಂ ಪಿಡಿಓ ಸುನೀತ ಪೂಜೆ ಸಲ್ಲಿಸಿದರೆ, ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಶಾಲಾ ಮಕ್ಕಳು ಪುಷ್ಪಾರ್ಚನೆ ಮಾಡಿದರು. ರಥ ಯಾತ್ರೆ ಸಂಚರಿಸಿದ ಎಲ್ಲಾ ಗ್ರಾಪಂ ಕೇಂದ್ರಗಳಲ್ಲಿ ಕಲಾ ತಂಡದ ಸದಸ್ಯರು ಸಮ್ಮೇಳನಕ್ಕೆ ಸ್ವಾಗತ ಕೋರುವ ಗೀತೆಗೆ ನೃತ್ಯ ಪ್ರದರ್ಶಿಸಿ ಜನರನ್ನು ಆಹ್ವಾನಿಸಿದರು.

ಬಳಿಕ ಚಿಣ್ಯ, ಕಾಂತಾಪುರ ಮತ್ತು ಬೋಗಾದಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿದ ರಥ ಯಾತ್ರೆ ಸಂಜೆ ವೇಳೆಗೆ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿತು.