ಪೂರ್ಣಿಮಾ ಕೃತಿ ಸ್ತ್ರೀ ಚಿಂತನೆಗಳ ಮತ್ತೊಂದು ಮಜಲು: ಪ್ರೊ. ಮಂಜಯ್ಯ ಡಿ.ಕೆ.

| Published : May 27 2024, 01:04 AM IST

ಪೂರ್ಣಿಮಾ ಕೃತಿ ಸ್ತ್ರೀ ಚಿಂತನೆಗಳ ಮತ್ತೊಂದು ಮಜಲು: ಪ್ರೊ. ಮಂಜಯ್ಯ ಡಿ.ಕೆ.
Share this Article
  • FB
  • TW
  • Linkdin
  • Email

ಸಾರಾಂಶ

ಆತ್ಮಕತೆಗಳ ವಸ್ತುನಿಷ್ಠತೆಯ ಬಗ್ಗೆ ಹೆಚ್ಚು ಪ್ರಶ್ನೆಗಳು ಎದುರಾಗುತ್ತಿರುವ ಈ ದಿನಗಳಲ್ಲಿ ಪೂರ್ಣಿಮಾ ಅವರ ಅನುಭವಗಳ ದಾಖಲೀಕರಣ ಪ್ರಾಮಾಣಿಕವಾಗಿದೆ ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜು (ಗಂಧದಕೋಠಿ) ಪ್ರಾಂಶುಪಾಲ ಪ್ರೊ.ಮಂಜಯ್ಯ ಡಿ.ಕೆ. ಅಭಿಪ್ರಾಯಪಟ್ಟರು. ಹಾಸನದಲ್ಲಿ ಸ.ವೆಂ. ಪೂರ್ಣಿಮಾ ಅವರ ಕೃತಿ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃತಿ ಸಂವಾದ ಕಾರ್ಯಕ್ರಮ । ‘ಒಂದೆಲೆ ಮೇಲಿನ ಕಾಡು’ ಪುಸ್ತಕದ ಕುರಿತು ಮಾತು । ಅನುಭವಗಳ ದಾಖಲೀಕರಣ

ಕನ್ನಡಪ್ರಭ ವಾರ್ತೆ ಹಾಸನ

‘ಒಂದೆಲೆ ಮೇಲಿನ ಕಾಡು’ ಕೃತಿಯು ಆತ್ಮಕಥಾ‌ನಕವಾಗಿ ಮೂಡಿ ಬಂದಿದೆ. ಆತ್ಮಕತೆಗಳ ವಸ್ತುನಿಷ್ಠತೆಯ ಬಗ್ಗೆ ಹೆಚ್ಚು ಪ್ರಶ್ನೆಗಳು ಎದುರಾಗುತ್ತಿರುವ ಈ ದಿನಗಳಲ್ಲಿ ಪೂರ್ಣಿಮಾ ಅವರ ಅನುಭವಗಳ ದಾಖಲೀಕರಣ ಪ್ರಾಮಾಣಿಕವಾಗಿದೆ ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜು (ಗಂಧದಕೋಠಿ) ಪ್ರಾಂಶುಪಾಲ ಪ್ರೊ.ಮಂಜಯ್ಯ ಡಿ.ಕೆ. ಅಭಿಪ್ರಾಯಪಟ್ಟರು.

ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ್ದ ಸ.ವೆಂ. ಪೂರ್ಣಿಮಾ ಅವರ ಕೃತಿ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲೆನಾಡಿನ ಆಚೆ ನಿಂತು ಮಾತನಾಡುವುದು ಕೇಳುವುದಕ್ಕೆ ಚಂದ ಅಂದ ಮೇಲೆ ಅಲ್ಲಿಯ ಸ್ಥಳೀಯರೇ ಮಾತಾನಾಡಿದಾಗ ಹೆಚ್ಚಿನ ಖುಷಿ ನೀಡುತ್ತದೆ. ಹೆಚ್ಚು ಸ್ತ್ರೀ ಪರ ಚಿಂತನೆಗಳನ್ನು ತಮ್ಮ ಕೃತಿಯಲ್ಲಿ ದಾಖಲಿಸುತ್ತ ಓದುಗರನ್ನು ಸಂಘರ್ಷಕ್ಕೆ ಈಡುಮಾಡುವ ಪೂರ್ಣಿಮಾ ಅವರ ಬರವಣಿಗೆ ಶಕ್ತಿಯುತವಾಗಿದೆ ಎಂದು ಹೇಳಿದರು.

ಕೃತಿಯ ಲೇಖಕಿ ಸ.ವೆಂ.ಪೂರ್ಣಿಮಾ ಮಾತನಾಡಿ, ‘ವಿದ್ಯಾರ್ಥಿಗಳ ಜತೆ ಬರವಣಿಗೆ ಅನುಭವ ಹಂಚಿಕೊಳ್ಳುವುದು ಸಾರ್ಥಕ ಕೆಲಸ. ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಚಿಂತನೆಗಳನ್ನು ಹರಡಲು ಪಠ್ಯದಾಚೆಗಿನ ಈ ಕೃತಿಗಳು ಸಹಕಾರಿಯಾಗುತ್ತವೆ’ ಎಂದು ತಿಳಿಸಿದರು.

ಸಂಚಾಲಕ ಮೋಹನ್ ಕುಮಾರ್‌, ವೇಗದ ಈ ದಿನಗಳಲ್ಲಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳಲು ಪುಸ್ತಕಗಳು ಸಹಕಾರಿಯಾಗುತ್ತವೆ. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುವುದು ಬಹಳ ಮುಖ್ಯವಾದ ಕೆಲಸ ಎಂದು ಹೇಳಿದರು.

ಕನ್ನಡ ವಿಭಾಗದ ಸುರೇಶ್ ಮಾತನಾಡಿ, ಕೃತಿ ರಚನೆ ಮಾಡಿದ ನಂತರ ವಿಮರ್ಶಕರು ಜನರ ಮುಂದೆ ವಿವರ ನೀಡಬೇಕಾಗುತ್ತದೆ. ಸಾಹಿತಿಯ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುವಾಗ ಕೃತಿ ರಚನೆಕಾರರ ನೋಯಿಸದೇ ಇರುವ ಎಚ್ಚರ ವಹಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೃತಿ ವಿಮರ್ಶೆ ಮಾಡಿ ಮಾತನಾಡಿದ ಕುಮಾರಿ ವರ್ಷಿತಾ, ಸಂಬಂಧಗಳ ಬಾಂಧವ್ಯದ ಕುರಿತಾಗಿ ಒಂದೆಲೆ ಮೇಲಿನ ಕಾಡು ಕೃತಿ ಮಾತನಾಡುತ್ತದೆ ಎಂದರು‌.

ಕುಟುಂಬ ವ್ಯವಸ್ಥೆಯ ವಿವರಗಳನ್ನು ಓದುಗರ ನಡುವೆ ಮುತ್ತುಗಳಂತೆ ಪೋಣಿಸಿಕೊಟ್ಟಿದ್ದಾರೆ. ಇದನ್ನು ಓದುತ್ತ ಒಬ್ಬ ವಿಮರ್ಶಕಿಯಾಗಿಯೂ ಭಾವುಕಳನ್ನಾಗಿಸಿತು. ಆಧುನಿಕ ಜಗತ್ತಿನಲ್ಲಿ ಮೊಬೈಲ್, ಧಾರಾವಾಹಿಗಳ ಮೂಲಕ ಸಂಬಂಧಗಳ ಬೆಲೆ ಕಾಣೆಯಾಗುತ್ತಿರುವಾಗ ಇಲ್ಲಿ ನಮಗೆ ಸಂಬಂಧಗಳ ಮಹತ್ವವನ್ನು ತೋರಿಸುತ್ತದೆ ಎಂದು ವಿವರಿಸಿದರು.

ಸಂಸ್ಕೃತಿಯ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿಸುವ ಈ ಕೃತಿ ಆ ಕಾರಣಕ್ಕೆ ಗಟ್ಟಿಯಾದದ್ದು. ಸಂಬಂಧಕ್ಕೆ ರಕ್ತ ಕಾರಣವೇ ಆಗಬೇಕಿಲ್ಲ ಎನ್ನುವ ಪೂರ್ಣಿಮಾ ಅವರು ರಕ್ತಸಂಬಂಧದ ಆಚೆಗಿನ ಸಂಬಂಧಗಳಲ್ಲೂ ಅಣ್ಣಂದಿರಿದ್ದಾರೆ, ಅಕ್ಕತಂಗಿಯರಿದ್ದಾರೆ, ಅಪ್ಪ ಅಮ್ಮಂದಿರಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಈ ಕೃತಿಯ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಕವಯಿತ್ರಿ ಡಾ.ಭವ್ಯ ಮಾತನಾಡಿ, ಬರವಣಿಗೆಯಲ್ಲಿ ನಮ್ಮದೇ ಇತಿಹಾಸ ದಾಖಲಿಸುವುದು ಮುಖ್ಯವಾಗುತ್ತದೆ. ಅಂತಹ ಒಂದು ಸಣ್ಣ ಸಣ್ಣ ಇತಿಹಾಸಗಳ ದಾಖಲೀಕರಣವನ್ನು ಒಂದೆಲೆ ಮೇಲಿನ ಕಾಡು ಕೃತಿಯಲ್ಲಿ ಸ.ವೆಂ.ಪೂರ್ಣಿಮಾ ಮಾಡಿದ್ದಾರೆ. ಜ್ಞಾನ ಗ್ರಹಿಕೆಯ ಕಾರಣದಲ್ಲಿ ಈ ಕೃತಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ನೋಡುವ ಕಾರಣಕ್ಕಾಗಿ ಈ ಕೃತಿ ಓದಬೇಕಿದೆ ಎಂದರು.

ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಗೋದರ್ಶಿನಿ ನಿರೂಪಣೆ ಮಾಡಿದರು. ಪದವಿ ಕಡೆಯ ವರ್ಷದ ಕನ್ನಡ ಐಚ್ಚಿಕ ವಿಧ್ಯಾರ್ಥಿನಿಗಳು ಲೇಖಕಿಯೊಟ್ಟಿಗೆ ಸಂವಾದ ನಡೆಸಿದರು.

ಕನ್ನಡ ವಿಭಾಗದ ಉಪನ್ಯಾಸಕರಾದ ಪೂರ್ಣಿಮಾ, ಕಾಂತರಾಜ್, ಪದ್ಮಾವತಿ ಇತರರು ಹಾಜರಿದ್ದರು.