ಸಾರಾಂಶ
ಉಡುಪಿ ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯಿಂದ ಗುಂಡಿಬೈಲು ಕಡೆಗೆ ಹೋಗುವವರಿಗೆ ಫ್ರೀ ಲೆಫ್ಟ್ ಮಾಡಿಕೊಡಲಾಗುವುದು. ಯೂ-ಟರ್ನ್ ಇರುವ ಕಡೆಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರ ನಡೆಸದಂತೆ ನಿರ್ಬಂಧಿಸಲಾಗುವುದು ಎಂದು ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.ಸೋಮವಾರ ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗುಂಡಿಬೈಲು, ಆಭರಣ ರಸ್ತೆ, ಬನ್ನಂಜೆ ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುವವರಿಗೆ ನೋಟಿಸ್ ನೀಡಲಾಗುವುದು. ಸೂಕ್ತ ಜಾಗದಲ್ಲಿ ವಹಿವಾಟು ನಡೆಸುವಂತೆ ಸೂಚಿಸಲಾಗುವುದು. ನಗರದಲ್ಲಿ ಗೂಡಂಗಡಿಗಳಿಗೆ ಏಕರೂಪ ಡಿಸೈನ್ ನೀಡಲಾಗುವುದು ಎಂದು ಹೇಳಿದರು.ಪ್ರಸ್ತುತ ನಗರದ ವಿವಿಧೆಡೆ ಅಳವಡಿಸಿರುವ ಬೃಹತ್ ಸಿಗ್ನಲ್ ಕಂಬಗಳಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು, ಕಲ್ಸಂಕದಲ್ಲಿ ವೈಜ್ಞಾನಿಕವಾಗಿ ಸಿಗ್ನಲ್ ಲೈಟ್ ಹಾಕಲಾಗುವುದು. ಇದಕ್ಕೆ 60ರಿಂದ 70 ಲಕ್ಷ ರು. ವೆಚ್ಚ ಅಂದಾಜಿಸಲಾಗಿದೆ ಎಂದರು.ನಗರಸಭಾ ಸದಸ್ಯೆ ಸರಿತಾ ಹರೀಶ್ ರಾಮ್ ಮಾತನಾಡಿ, ನಗರಸಭೆ ಗುರುತಿಸಿರುವ ಬ್ಲಾಕ್ ಸ್ಪಾಟ್ಗಳಲ್ಲಿ ಕಸತಂದು ಹಾಕುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಅಳವಡಿಸುವಂತೆ ಆಗ್ರಹಿಸಿದರು.ಸದಸ್ಯ ಮಂಜುನಾಥ ಮಣಿಪಾಲ ಮಾತನಾಡಿ, ಮಣಿಪಾಲದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣದಿಂದ ಈಶ್ವರನಗರದ ವರೆಗೆ ಫ್ಲೈ ಓವರ್ ನಿರ್ಮಿಸಿದರೆ ಉತ್ತಮ. ಮಣಿಪಾಲದಲ್ಲಿ ಸಂತೆ ಮಾರುಕಟ್ಟೆಗೆ ಜಾಗ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸುವಂತೆ ಮನವಿ ಮಾಡಿದರು.ಸದಸ್ಯ ವಿಜಯ ಕೊಡವೂರು ಮಾತನಾಡಿ, ನಿಟ್ಟೂರು ಎಸ್‌ಟಿಪಿ ಮೇಲ್ದರ್ಜೆಗೆ ಏರಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ, ಲೆಕ್ಕಾಧಿಕಾರಿ ಸಿ.ಆರ್. ದೇವಾಡಿಗ ಉಪಸ್ಥಿತರಿದ್ದರು.