ಪಟ್ಟಣದಲ್ಲಿ ಸ್ವಚ್ಛತೆ ವಾತಾವರಣ ನಿರ್ಮಾಣಕ್ಕಾಗಿ ಸಮಗ್ರ ಒಳಚರಂಡಿ ತುಂಬಾ ಅತ್ಯವಶ್ಯಕವಾಗಿದ್ದು, ಸರಕಾರದ ಮೇಲೆ ₹36 ಕೋಟಿ ಅನುದಾನಕ್ಕಾಗಿ ಒತ್ತಾಯಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ಪಟ್ಟಣದಲ್ಲಿ ಸ್ವಚ್ಛತೆ ವಾತಾವರಣ ನಿರ್ಮಾಣಕ್ಕಾಗಿ ಸಮಗ್ರ ಒಳಚರಂಡಿ ತುಂಬಾ ಅತ್ಯವಶ್ಯಕವಾಗಿದ್ದು, ಸರಕಾರದ ಮೇಲೆ ₹36 ಕೋಟಿ ಅನುದಾನಕ್ಕಾಗಿ ಒತ್ತಾಯಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತ ಸರಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಮೈತ್ರಿ ಹೋರಾಟ ನಡೆದಿರುವುದರಿಂದ ವಿಷಯ ಚರ್ಚೆಗೆ ಬಂದಿಲ್ಲ. ಆದರೂ ನಗರಾಭಿವೃದ್ಧಿ ಸಚಿವರಿಂದ ಮಾಹಿತಿ ದೊರಕಿದೆ. ಪುರಸಭೆ 33 ಲಕ್ಷ ವಂತಿಗೆ ಕೊಡಬೇಕೆಂದಿದ್ದಾರೆ. ಸ್ಥಳೀಯ ಪುರಸಭೆಯಲ್ಲಿ ಆರ್ಥಿಕ ಅನುಕೂಲತೆ ಇರುವ ಕುರಿತು ಸರಕಾರದ ಗಮನ ಸೆಳೆದಿರುವೆ. ಕೆಕೆಆರ್ಡಿಬಿ ಯೋಜನೆಯಲ್ಲಿ ಪಟ್ಟಣದಲ್ಲಿ ರಸ್ತೆ ನಿರ್ಮಾಣ ಮಾಡಲು ಒಳಚರಂಡಿ ನಿರ್ಮಾಣವಾಗದಿರುವುದು ಅಡ್ಡಿಯಾಗಿದೆ, ಕಾರಣ ವಸ್ತು ಸ್ಥಿತಿಯ ಕುರಿತು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಲಾಗುವುದು. ಮಲ್ಲಾಪೂರ ಗ್ರಾಮದ ಶಾಲೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಾಗ ಆರೋಗ್ಯ, ತಾಪಂ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಅಧಿಕಾರಿಗಳು ತುರ್ತಾಗಿ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು, ನಾನು ಸಹ ಮಕ್ಕಳೊಂದಿಗೆ ಸಂವಾದ ಮಾಡಿರುವೆ. ಎಲ್ಲಾ ಮಕ್ಕಳು ಆರೋಗ್ಯದಿಂದ ಇದ್ದಾರೆ. ಯಾರೂ ಆತಂಕ ಪಡಬೇಕಾಗಿಲ್ಲ, ಇನ್ನು, ಇತ್ತೀಚಿಗೆ ಜಾಲಹಳ್ಳಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿರುವೆ ಎಂದರು.
ಪಕ್ಷದ ಮುಖಂಡರು, ಕಾರ್ಯಕರ್ತರು, ವಯಕ್ತಿಕ ಯೋಜನೆಯ ಫಲಾನುಭವಿಗಳು ನನ್ನ ಗಮನಕ್ಕಿರದೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದರಲ್ಲದೆ, ಸರಕಾರ ಈಗಾಗಲೇ ಸಿದ್ಧಪಡಿಸಿರುವ ಬರಗಾಲ ಘೋಷಣೆ ಪಟ್ಟಿಯಲ್ಲಿ ದೇವದುರ್ಗ ಮತ್ತು ಅರಕೇರಾ ತಾಲೂಕುಗಳು ಸೇರ್ಪಡೆಗೊಂಡಿವೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಆ.27ರಂದು ಅದಿವೇಶನದಲ್ಲಿರುವು ದರಿಂದ ಯಾರೂ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಬಾರದು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಮನವಿ ಮಾಡಿದರು.ಆ.27ರಂದು ನನ್ನ ಹುಟ್ಟು ಹಬ್ಬವಿದ್ದು, ಬರಗಾಲ ಪರಿಸ್ಥಿತಿ ಇರುವುದರಿಂದ ಹಬ್ಬಾಚರಣೆ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇನೆ. ಮುಂಗಾರು ಮಳೆ ಮತ್ತು ಬೆಳೆ ಕೈಕೊಟ್ಟಿದ್ದು ರೈತ ಬಂಧುಗಳು ಸಂಕಷ್ಟದಲ್ಲಿದ್ದಾರೆ. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಸಡಗರ, ಸಂಭ್ರಮಗಳು ಬೇಡ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಶರಣಪ್ಪ ಬಳೆ, ಜಿಲ್ಲಾ ಉಪಾಧ್ಯಕ್ಷ ಅಮರೇಶ ಪಾಟೀಲ್ ಪರ್ತಪೂರ, ತಾಲೂಕು ಅಧ್ಯಕ್ಷರುಗಳಾದ ಬಸನಗೌಡ ದೇಸಾಯಿ, ಸಿದ್ದಣ್ಣ ಬಿ.ಗಣೇಕಲ್, ವಕ್ತಾರ ಗೋವಿಂದರಾಜ್ ನಾಯಕ, ಮುಖಂಡರಾದ ಹನುಮಂತ್ರಾಯ ನಾಯಕ ಚಿಂತಲಕುಂಟಿ, ಶಾಲಂ ಉದ್ದಾರ, ಭೀಮಣ್ಣ ಗೋಸುಲ್, ಶಮೀನಾ ಬೇಗಂ, ಶಿವು ಕಾಳೆ ಇದ್ದರು.