ಪಂಡಿತನಹಳ್ಳಿ ಕೆರೆಗೆ ಪುಷ್ಪಗಿರಿ ಶ್ರೀ ಬಾಗಿನ

| Published : Jul 29 2024, 12:48 AM IST

ಸಾರಾಂಶ

ಪುಷ್ಪಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಸೋಮಶೇಖರ ಸ್ಬಾಮೀಜಿ ಬೇಲೂರು ತಾಲೂಕಿನ ಪಂಡಿತನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ಬರಪೀಡಿತ ಪ್ರದೇಶಗಳಾದ ಹಳೇಬೀಡು, ಮಾದಿಹಳ್ಳಿ ಮತ್ತು ಸಾಲಗಾಮೆಯ ಕೆರೆಗಳಿಗೆ ನೀರು ತುಂಬಿಸುವ 126 ಕೋಟಿ ರು. ವೆಚ್ಚದ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ ಪುಷ್ಪಗಿರಿ ಕ್ಷೇತ್ರದ ಸ್ವಾಮೀಜಿಯವರ ಕೊಡುಗೆ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಬರಪೀಡಿತ ಪ್ರದೇಶಗಳಾದ ಹಳೇಬೀಡು, ಮಾದಿಹಳ್ಳಿ ಮತ್ತು ಸಾಲಗಾಮೆಯ ಕೆರೆಗಳಿಗೆ ನೀರು ತುಂಬಿಸುವ 126 ಕೋಟಿ ರು. ವೆಚ್ಚದ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ ಪುಷ್ಪಗಿರಿ ಕ್ಷೇತ್ರದ ಸ್ವಾಮೀಜಿಯವರ ಕೊಡುಗೆ ಶ್ಲಾಘನೀಯ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.

ತಾಲೂಕಿನ ಪಂಡಿತನಹಳ್ಳಿ ಕೆರೆಗೆ ಪುಷ್ಪಗಿರಿ ಕ್ಷೇತ್ರದ ಸೋಮಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಪುಷ್ಪಗಿರಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಮತ್ತು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೀಗಳು ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಎಂದರು.

ಪುಷ್ಪಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಸೋಮಶೇಖರ ಸ್ಬಾಮೀಜಿ ಮಾತನಾಡಿ, ಈ ಬಾರಿ ವರುಣನ ಕೃಪೆಯಿಂದ ಉತ್ತಮ ಮಳೆ ಬೆಳೆಯಾಗಿದ್ದು ರೈತರ ಸಂಕಷ್ಟ ದೂರವಾಗಿದೆ. ಹಳೇಬೀಡು ಭಾಗದ ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಿ ಬರ ನೀಗಿದಂತಾಗಿದೆ ಎಂದರು. ಹಳ್ಳಿಗಳಲ್ಲಿ ಕೆರೆಕಟ್ಟೆಗಳು ಅತ್ಯವಶ್ಯಕ ಹಾಗೂ ಉಪಯುಕ್ತವಾಗಿವೆ. ಆದ್ದರಿಂದ ಕೆರೆಗಳನ್ನು ಕಡೆಗಣಿಸಬಾರದು. ಕೆರೆಗಳು ಇದ್ದರೆ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ತಾಲೂಕಿನ ಕೆರೆಗಳ ಸುತ್ತ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ. ಕೆರೆಯ ಹೂಳನ್ನು ತೆಗೆಸಬೇಕಾಗಿದೆ. ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ‌. ಶಿವರಾಜ್, ರೈತ ಮುಖಂಡರಾದ ಮಲ್ಲಿಕ್, ಚಂದ್ರಕಾಂತ್, ಪರಮೇಶ್, ರಂಗನಾಥ್, ಶೇಖರೇಗೌಡ, ಕುಮಾರನಹಳ್ಳಿ ಕುಮಾರ್ ಹಾಜರಿದ್ದರು.