ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮನುಷ್ಯರಲ್ಲಿರುವ ಉತ್ತಮ ಗುಣಗಳನ್ನು ಆಧರಿಸಿ ಮೋಕ್ಷ, ಸ್ವರ್ಗವನ್ನು ಕರುಣಿಸುವ ಶಕ್ತಿ ಶ್ರೀ ಸದಾಶಿವೇಶ್ವರ ದೇವರಿಗಿದೆ. ಲೌಕಿಕ ಜಗತ್ತಿನಲ್ಲಿ ರಥದ ಮೂಲಕ ದೇವರಿಗೆ ಶೋಭಾಯಾತ್ರೆ ನಡೆಸುವುದರಿಂದ ಊರಿನ ಶ್ರೇಯೋಭಿವೃದ್ಧಿ ಉಂಟಾಗುವುದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ಸೋಮವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಪುಷ್ಪರಥದ ಭವ್ಯ ಶೋಭಾಯಾತ್ರೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶೋಭಾಯಾತ್ರೆಗೆ ಚಾಲನೆ ನೀಡಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಶ್ರೀ ಜನಾರ್ದನ ಸ್ವಾಮಿ ಹಾಗೂ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಗಳು ಸೀಮೆ ದೇವಸ್ಥಾನಗಳಾಗಿದ್ದು, ಪುಷ್ಪರಥ ಸಮರ್ಪಣೆಯ ಮೂಲಕ ಎರಡು ದೇವಸ್ಥಾನಗಳ ನೂರಾರು ವರ್ಷಗಳ ಸಂಬಂಧ ಮರು ಮನನ ಮಾಡಿಕೊಂಡ ಐತಿಹಾಸಿಕ ಕ್ಷಣವಾಗಿದೆ ಎಂದರು.ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ ಹೊಳ್ಳ ಪ್ರಾರ್ಥಿಸಿ ಪುಷ್ಪರಥದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನಾಗಶಯನ ರಾವ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೆ. ಮೋಹನ್ ಕುಮಾರ್, ಪುಷ್ಪರಥ ದಾನಿಗಳಾದ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ದಂಪತಿ, ರಥದ ಶಿಲ್ಪಿ ಸುಧಾಕರ ಡೋಂಗ್ರೆ ಬಜಗೋಳಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ್ ಭಟ್, ಅಧ್ಯಕ್ಷ ರಾಧಾಕೃಷ್ಣ ಗೌಡ, ರತನ್ ಕುಮಾರ್ ಜೈನ್ ಹುಣಿಪಾಜೆ ಮತ್ತಿತರರು ಇದ್ದರು.ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ರಾಜೇಶ್ ಹೊಳ್ಳ ಸಹಕಾರದಲ್ಲಿ ಸೋಮವಾರ ಗಣಹೋಮ, ತೋರಣ ಮುಹೂರ್ತ, ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ ಇನ್ನಿತರ ಕಾರ್ಯಕ್ರಮಗಳು ನಡೆದವು.
ಮುಂಚಾನ ಮನೆಯವರಿಂದ ಕೊಡುಗೆ:ಕಲ್ಮಂಜ ಗ್ರಾಮದ ಮುಂಚಾನ ಮನೆಯ ಸುಕನ್ಯಾ ಮತ್ತು ಡಿ.ಜಯರಾಮ ರಾವ್ ಮತ್ತು ಮಕ್ಕಳು ಸುಮಾರು ೮ ಲಕ್ಷ ರು. ಅಂದಾಜು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿ ಸೇವಾರೂಪದಲ್ಲಿ ಶ್ರೀ ಸದಾಶಿವ ದೇವರಿಗೆ ಸಮರ್ಪಿಸಲಿರುವ ಪುಷ್ಪರಥವನ್ನು ಬಜಗೋಳಿಯ ಸುಧಾಕರ ಡೊಂಗ್ರೆಯವರು ಸುಂದರ ಕಲಾಕೃತಿಗಳೊಂದಿಗೆ ನಿರ್ಮಿಸಿದ್ದು, ಶ್ರೀ ದೇವರ ವಾರ್ಷಿಕ ಉತ್ಸವ ವೇಳೆ ರಥಾರೋಹಣಗೈದು ಭಕ್ತರಿಗೆ ದರ್ಶನ ನೀಡಲಿದ್ದಾರೆ.