ಸರ್ಕಾರಕ್ಕೆ ತೆರಿಗೆ ವಂಚಿಸಿ ಗುಟ್ಕಾ ಮಾರಾಟ ಮಾಡುವುದು ಹೆಚ್ಚುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿ. ಗುಟ್ಕಾ, ಗಾಂಜಾ ಮಾರಾಟ ಬ್ಯಾನ್ ಮಾಡಿ ಎಂದು ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚನೆ ನೀಡಿದ್ದಾರೆ.

- ಗುಟ್ಕಾ, ಡ್ರಗ್ಸ್, ಗಾಂಜಾ ಬ್ಯಾನ್ ಮಾಡಿರಿ: ಹರಿಹರ ಶಾಸಕ ಹರೀಶ್ । ವೈದ್ಯಕೀಯ ಪರಿಕರ ನಿರ್ಲಕ್ಷ್ಯ: ಶಾಸಕ ಬಸಂತಪ್ಪ ಕಿಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಕ್ಕೆ ತೆರಿಗೆ ವಂಚಿಸಿ ಗುಟ್ಕಾ ಮಾರಾಟ ಮಾಡುವುದು ಹೆಚ್ಚುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿ. ಗುಟ್ಕಾ, ಗಾಂಜಾ ಮಾರಾಟ ಬ್ಯಾನ್ ಮಾಡಿ ಎಂದು ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚನೆ ನೀಡಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗುಟ್ಕಾ ವ್ಯವಹಾರ ಹೆಚ್ಚಾಗುತ್ತಿದೆ. ಗುಟ್ಕಾ ಯಾರು ತಯಾರಿಸುತ್ತಾರೆ, ಮಾರಾಟ ಮಾಡುತ್ತಾರೆ ಎಂಬದರ ಬಗ್ಗೆ ಗಮನಹರಿಸಿ. ಟ್ಯಾಕ್ಸ್ ವಂಚಿಸಿ ಬಹಳ ಗುಟ್ಕಾ ಮಾರಾಟ ವಿರುದ್ಧ ಜಿಲ್ಲಾಧಿಕಾರಿ ಅವರು ಕಠಿಣ ಕ್ರಮಗಳ ಕೈಗೊಳ್ಳಲಿ. ಕೇಂದ್ರ ಸರ್ಕಾರವೂ ಮೊನ್ನೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹೇರಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ಗುಟ್ಕಾ ಮಾರುತ್ತಾರೆಂಬ ಬಗ್ಗೆ ಸರ್ವೇ ಮಾಡಿ ಎಂದರು.

ಸಚಿವರ ಮಾತಿಗೆ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಗುಟ್ಕಾ, ಡ್ರಗ್ಸ್, ಗಾಂಜಾ ಎಲ್ಲದರ ಹಾವಳಿಯೂ ಹೆಚ್ಚಾಗುತ್ತಿದೆ. ಅವುಗಳನ್ನು ಬ್ಯಾನ್ ಮಾಡಿದರೆ ನಮ್ಮಂತಹ ಮಧ್ಯಮ ವರ್ಗದವರು ಚುನಾವಣೆ ಮಾಡಲು ಸುಲಭವಾಗುತ್ತದೆ ಎಂದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಸಿಎಸ್ಆರ್‌ ಅನುದಾನದಲ್ಲಿ ಪವರ್ ಗ್ರಿಡ್‌ನವರು ಜಿಲ್ಲಾಸ್ಪತ್ರೆಗೆ ಕೋಟ್ಯಂತರ ರು. ಮೌಲ್ಯದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮೂಲೆಯಲ್ಲಿ ಧೂಳು ಹಿಡಿಯುವಂತೆ ಇಟ್ಟಿದ್ದಾರೆ. ಕೇವಲ ಫೋಟೋಗಾಗಿ ಪರಿಕರ ನೀಡಿದರೆ ಏನು ಉಪಯೋಗ? ಅವು ಜನರಿಗೆ ಉಪಯೋಗವಾದರೆ ಕೊಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಒಂದೂವರೆ ವರ್ಷದಿಂದ ಕುರ್ಚಿ ಸೇರಿದಂತೆ ಕೋಟ್ಯಂತರ ರು. ವೆಚ್ಚದ ಪರಿಕರಗಳು ಧೂಳು ಹಿಡಿದು ಹಾಳಾಗುವಂತಾಗಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮಾತನಾಡಿ, ಯಾವ್ಯಾವ ಆಸ್ಪತ್ರೆಗೆ ಅಂತಹ ಪರಿಕರಗಳ ಅವಶ್ಯಕತೆ ಇದೆಯೋ ಅಲ್ಲಿಗೆ ಕಳಿಸಿ ಕೊಡಿ. ದಾನ, ಕೊಡುಗೆ, ಕಾಣಿಕೆ ರೂಪದಲ್ಲಿ ಕೊಟ್ಟಂತಹ ವಸ್ತುಗಳು, ಪರಿಕರಗಳನ್ನೇ ವೈದ್ಯಾಧಿಕಾರಿಗಳು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳದಿದ್ದರೆ ಏನರ್ಥ ಎಂದು ಕಿಡಿಕಾರಿದರು.

ಆಗ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯೇ ಸತ್ತುಹೋಗಿದೆ. ಯಾವುದೇ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸರಿಯಾಗಿ ಸೇವೆ ಒದಗಿಸುತ್ತಿಲ್ಲ. ಕೆಲ ಪಿಎಚ್‌ಸಿಗಳಿಗೆ ಮೂಲ ಸೌಕರ್ಯಗಳೇ ಇಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಸಚಿವ ಎಸ್‌.ಎಸ್‌.ಎಂ. ಪ್ರತಿಕ್ರಿಯಿಸಿ, ಹಿಂದೆಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಿಕೊಳ್ಳಲು ರೆಡ್ ಕಾರ್ಪೆಟ್ ಹಾಕಿ, ಬರ ಮಾಡಿಕೊಳ್ಳುತ್ತಿದ್ದೆವು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಸಾಕಷ್ಟು ವೈದ್ಯರು ಸೇವೆಗೆ ಲಭ್ಯವಿದ್ದಾರೆ. ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಂಡು, ಜನರಿಂದ ಯಾವುದೇ ದೂರುಗಳಿಗೆ ಅವಕಾಶ ಇಲ್ಲದೇ, ಸೇವೆಯನ್ನು ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಲು ಅಗತ್ಯ ಡಿಪಿಆರ್ ತಯಾರಿಸಿ ಕೊಡುವಂತೆ ಡಿಎಚ್‌ಒಗೆ ಆದೇಶಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ನಗರದಲ್ಲಿ ಬೀದಿನಾಯಿಗಳು ಹಾಗೂ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಬರುತ್ತಿವೆ. ಮೊದಲು ಇವುಗಳಿಗೆ ಕಡಿವಾಣ ಹಾಕುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ವಾಸಿಸುವ ಬೀದಿನಾಯಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಅವುಗಳ ರಕ್ಷಣೆಗೆ ಜಾಗ ಗುರುತಿಸಿದ್ದು, ಶೀಘ್ರವೇ ಅದನ್ನು ಕಾರ್ಯರೂಪಕ್ಕೆ ತರುವುದಾಗಿ ಸ್ಪಷ್ಟಪಡಿಸಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಭಿಯಂತರ ಮಾತನಾಡಿ, ಜಲ ಜೀವನ್ ಮಿಷನ್‌ನಡಿ ದಿನದ 24 ಗಂಟೆ ನೀರು ಪೂರೈಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಜಿಲ್ಲೆಯ 46 ಗ್ರಾಮಗಳ ಜನರು ತಿರಸ್ಕರಿಸಿದ್ದಾರೆ. ಈಗಾಗಲೇ ಈ ವಿಚಾರವನ್ನು ನವದೆಹಲಿಯ ಐಎಂಎಗೆ ಸಲ್ಲಿಸಲಾಗಿದೆ. ಈ ಗ್ರಾಮಗಳನ್ನು ಜಲ ಜೀವನ್ ಮಿಷನ್ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಆಗ ಸಚಿವ ಎಸ್‌ಎಸ್‌ಎಂ, ಮತ್ತೊಮ್ಮೆ ಹೊಸದಾಗಿ ಪಟ್ಟಿ ತಯಾರಿಸಿ, ಶಿಫಾರಸು ಮಾಡಿ, ಯೋಜನೆಗೆ ಅನುದಾನ ತರೋಣ ಎಂದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ವಿಪ ಸದಸ್ಯ ಡಿ.ಟಿ.ಶ್ರೀನಿವಾಸ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಸೇರಿದಂತೆ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

- - -

-12ಕೆಡಿವಿಜಿ6: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. -12ಕೆಡಿವಿಜಿ9: ದಾವಣಗೆರೆ ಜಿಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ.ಶಾಂತನಗೌಡ, ಬಿ.ಪಿ.ಹರೀಶ, ಕೆ.ಎಸ್.ಬಸವಂತಪ್ಪ, ಶಿವಗಂಗಾ ಬಸವರಾಜ ಇತರರು ಇದ್ದರು.