ಕೊಪ್ಪಳ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಹೋಟೆಲ್ ಮತ್ತು ಖಾನಾವಳಿಗಳಲ್ಲಿ ಮನಸೋಇಚ್ಛೆ ದರ ವಸೂಲಿ, ಕಳಪೆ ಆಹಾರ ಪೂರೈಕೆ ಹಾಗೂ ಮೂಲಸೌಕರ್ಯಗಳ ಕೊರತೆಗೆ ಕಡಿವಾಣ ಹಾಕುವಂತೆ ಜನಪರ ಸಂಘಟನೆಗಳ ಒಕ್ಕೂಟ ಬುಧವಾರ ಜಿಲ್ಲಾಡಳಿತಕ್ಕೆ ಅಂತಿಮ ಜ್ಞಾಪನಾ ಪತ್ರ ಸಲ್ಲಿಸಿದೆ.

ಕೊಪ್ಪಳ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಹೋಟೆಲ್ ಮತ್ತು ಖಾನಾವಳಿಗಳಲ್ಲಿ ಮನಸೋಇಚ್ಛೆ ದರ ವಸೂಲಿ, ಕಳಪೆ ಆಹಾರ ಪೂರೈಕೆ ಹಾಗೂ ಮೂಲಸೌಕರ್ಯಗಳ ಕೊರತೆಗೆ ಕಡಿವಾಣ ಹಾಕುವಂತೆ ಜನಪರ ಸಂಘಟನೆಗಳ ಒಕ್ಕೂಟ ಬುಧವಾರ ಜಿಲ್ಲಾಡಳಿತಕ್ಕೆ ಅಂತಿಮ ಜ್ಞಾಪನಾ ಪತ್ರ ಸಲ್ಲಿಸಿದೆ.

ಈ ಹಿಂದೆ ಆ. 7ರಂದು ಸಲ್ಲಿಸಿದ್ದ ಮನವಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಿಲ್ಲ. ಬೆರಳೆಣಿಕೆಯ ಹೋಟೆಲ್‌ಗಳಿಗೆ ಭೇಟಿ ನೀಡಿ ಅಲ್ಪ ಪ್ರಮಾಣದ ದಂಡ ವಿಧಿಸುವ ಮೂಲಕ ಕಾಟಾಚಾರದ ತಪಾಸಣೆ ನಡೆಸಲಾಗಿದೆ ಎಂದು ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ 15 ದಿನಗಳಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಡಳಿತ ಭವನದ ಎದುರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಹೋಟೆಲ್‌ಗಳಲ್ಲಿ ಒಂದು ಕೆಟಿ ಚಹಾಕ್ಕೆ ₹30ರಿಂದ ₹35 ಹಾಗೂ ಒಂದು ಇಡ್ಲಿಗೆ ₹20 ವಸೂಲಿ ಮಾಡಲಾಗುತ್ತಿದೆ. ಆದರೆ ಆಹಾರದ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸದೆ ಗ್ರಾಹಕರಿಂದ ಮನಬಂದಂತೆ ಹಣ ಪಡೆಯಲಾಗುತ್ತಿದೆ. ಇದು ಗ್ರಾಹಕರ ಸಂರಕ್ಷಣಾ ಕಾಯ್ದೆ ಹಾಗೂ ಕಾನೂನು ಮಾಪನಶಾಸ್ತ್ರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಹೋಟೆಲ್‌ಗಳನ್ನು ಅವಲಂಬಿಸಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಶುದ್ಧ ಕುಡಿಯುವ ಬಿಸಿ ನೀರು ಮತ್ತು ಸ್ವಚ್ಛ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸುತ್ತಿಲ್ಲ. ಅಡುಗೆಮನೆಗಳಲ್ಲಿ ನೈರ್ಮಲ್ಯ ಕಾಪಾಡುತ್ತಿಲ್ಲ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಒಕ್ಕೂಟದ ಪ್ರಮುಖ ಆಗ್ರಹಗಳು: ಕಂದಾಯ, ನಗರಸಭೆ, ಆಹಾರ ಸುರಕ್ಷತೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡ ರಚಿಸಿ ಜಿಲ್ಲೆಯ ಎಲ್ಲ ಹೋಟೆಲ್‌ಗಳ ಮೇಲೆ ದಾಳಿ ನಡೆಸಬೇಕು. ನಿಯಮ ಉಲ್ಲಂಘಿಸುವ ಹೋಟೆಲ್‌ಗಳ ವ್ಯಾಪಾರ ಮತ್ತು ಆಹಾರ ಸುರಕ್ಷತಾ ಪರವಾನಗಿ ಅಮಾನತುಗೊಳಿಸಬೇಕು. ಹೋಟೆಲ್ ಮಾಲೀಕರ ಸಭೆ ಕರೆದು ಆಹಾರದ ಗುಣಮಟ್ಟ ಮತ್ತು ಪ್ರಮಾಣಕ್ಕೆ ಅನುಗುಣವಾಗಿ ನ್ಯಾಯಸಮ್ಮತ ದರ ನಿಗದಿಪಡಿಸಬೇಕು. ಗ್ರಾಹಕರಿಗೆ ಕಾಣುವಂತೆ ದರಪಟ್ಟಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದೆ.

ತಪಾಸಣೆಗೆ ಮುನ್ನವೇ ಹೋಟೆಲ್ ಮಾಲೀಕರಿಗೆ ಮಾಹಿತಿ ಸೋರಿಕೆ ಮಾಡಿ ಕಾಟಾಚಾರದ ತಪಾಸಣೆ ನಡೆಸುವ ಸಿಬ್ಬಂದಿ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ್ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣಾ ವಿಭಾಗದ ತಹಸೀಲ್ದಾರ್ ರವಿಕುಮಾರ್ ವಸ್ತ್ರದ ಅವರಿಗೆ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಮಖಬೂಲ್ ರಾಯಚೂರು ಇದ್ದರು.