ಸಾರಾಂಶ
ಹೊಸಪೇಟೆ: ಜಿಲ್ಲೆಯಲ್ಲಿ ಹಾಲು ಕಡಿಮೆ ಮಾರಾಟವಾಗುತ್ತಿದ್ದು, ಮದ್ಯ ಜಾಸ್ತಿ ಮಾರಾಟವಾಗುತ್ತಿದೆ. ಅಕ್ರಮ ಮದ್ಯ ಮಾರಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಜೂಜಾಟ, ಗಾಂಜಾ, ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಇದಕ್ಕೆಲ್ಲ ತಕ್ಷಣ ಕಡಿವಾಣ ಹಾಕಿ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜಿಲ್ಲೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಎಸ್‌ಪಿ ಶೋಭಾರಾಣಿ ಅಕ್ರಮಕ್ಕೆ ಕಡಿವಾಣ ಹಾಕಿದ್ದಾರೆ. ಇಲ್ಲಿ ಏಕೆ ಆಗುತ್ತಿಲ್ಲ? ಎಂದುಎಸ್‌ಪಿ ಬಿ.ಎಲ್. ಶ್ರೀಹರಿಬಾಬು ಅವರನ್ನು ಸಚಿವರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.ಜಿಲ್ಲೆಯಲ್ಲಿ ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ದೊರೆಯುತ್ತಿದೆ. ಬರೀ 32 ಸಾವಿರ ಲೀ. ಅಕ್ರಮ ಮದ್ಯ ಮಾತ್ರ ಅಬಕಾರಿ ಇಲಾಖೆಯವರು ಒಂದು ವರ್ಷದಲ್ಲಿ ವಶಪಡಿಸಿಕೊಂಡಿದ್ದಾರೆ. ಪೊಲೀಸ್, ಅಬಕಾರಿ, ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಅಕ್ರಮ ಮರಳು ದಂಧೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಖಡಕ್ಕಾಗಿ ಎಚ್ಚರಿಸಿದರು.
ನಮಗೆ ಹರಾಮಿ ದುಡ್ಡು ಬೇಕಾಗಿಲ್ಲ: ಶಾಸಕ ನೇಮರಾಜ್ ನಾಯ್ಕ ಮಾತನಾಡಿ, ಜಿಲ್ಲೆಯ ಶಾಸಕರು, ಸಂಸದರು, ಸಚಿವರಿಗೆ ಅಕ್ರಮ ದುಡ್ಡು ಬೇಕಾಗಿಲ್ಲ. ಅಕ್ರಮ ದಂಧೆಗೆ ಕಡಿವಾಣ ಹಾಕಿ, ಅಕ್ರಮದ ವಿಷಯದಲ್ಲಿ ಪೊಲೀಸರಿಗೆ ಏಕೆ ಇಷ್ಟೊಂದು ಆಸಕ್ತಿ? ಮೊದಲು ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಕ್ರಿಕೆಟ್ ಜೂಜಾಟ, ಮಕ್ರಮ ಮದ್ಯ, ಮರಳು ದಂಧೆಗೆ ಕಡಿವಾಣ ಹಾಕಿ. ಇಂತಹ ದಂಧೆಗೆ ಬಡವರೇ ಬಲಿಪಶು ಆಗುತ್ತಿದ್ದಾರೆ. ನಮಗೆ ಬಡವರ ದುಡ್ಡು ಬೇಕಾಗಿಲ್ಲ. ಐಪಿಎಲ್ ಬೆಟ್ಟಿಂಗ್‌ನಿಂದ ಎಷ್ಟು ಜನ ಸತ್ತಿದ್ದಾರೆ ಗೊತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಸಂಸದ ತುಕಾರಾಂ, ಶಾಸಕರಾದ ಕೃಷ್ಣ ನಾಯ್ಕ, ಡಾ. ಎನ್.ಟಿ. ಶ್ರೀನಿವಾಸ್, ಶಾಸಕಿ ಎಂ.ಪಿ. ಲತಾ ಕೂಡ ಧ್ವನಿಗೂಡಿಸಿ ಮೊದಲು ಜಿಲ್ಲೆಯಲ್ಲಿ ಅಕ್ರಮ ದಂಧೆಗೆ ಕಡಿವಾಣ ಬೀಳಲಿ ಎಂದು ಆಗ್ರಹಿಸಿದರು.
ಶಾಸಕ ನೇಮರಾಜ್ ನಾಯ್ಕ ಮಾತನಾಡಿ, ಇಸ್ಪೀಟ್ ಜೂಜಾಟ, ಐಪಿಲ್ ಬೆಟ್ಟಿಂಗ್‌ನಲ್ಲಿ ಶಾಸಕರಿಗೂ ಪಾಲಿದೆಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ನಾವು ಅಭಿವೃದ್ಧಿ ಮಾಡುತ್ತಿದ್ದೇವೆ. ಆದರೆ, ಅಕ್ರಮ ದಂಧೆಗೆ ಕಡಿವಾಣ ಹಾಕದಿದ್ದರೆ ನಾವು ಮುಂದಿನ ಚುನಾವಣೆಯಲ್ಲಿ ಗ್ಯಾರಂಟಿ ಸೋಲುತ್ತೇವೆ. ಇದೇ ರೀತಿ ಮುಂದುವರಿದರೆ, ನಾವು ಶಾಸಕರು ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹರಿಹಾಯ್ದರು.ನಾನೇ ಖುದ್ದು ದಾಳಿ ಮಾಡುವೆ: ಸಚಿವ ಜಮೀರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಪೊಲೀಸರು ಯಾವುದೇ ಕೆಲಸ ಮಾಡದಿದ್ದರೆ, ನಾನೇ ಖುದ್ದು ದಾಳಿ ಮಾಡುವೆ. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಸೇರಿದಂತೆ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಎಸ್‌ಪಿಯವರು ಟೀಂ ರಚನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ನಕಲಿ ವೈದ್ಯರ ಹಾವಳಿ ತಡೆಯಿರಿ: ಜಿಲ್ಲೆಯಲ್ಲಿ ಅಕ್ರಮ ವೈದ್ಯರ ಹಾವಳಿ ತಡೆಯಬೇಕು ಎಂದು ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ ನಾಯ್ಕ ಅವರಿಗೆ ಸಚಿವರು ಸೂಚಿಸಿದರು. ಈಗಾಗಲೇ ನಕಲಿ ವೈದ್ಯರ ವಿರುದ್ಧ ಏಳು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಶೇಷ ತಂಡ ರಚನೆ ಮಾಡಲಾಗಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಎಚ್‌ಒ ಸಭೆಗೆ ಮಾಹಿತಿ ನೀಡಿದರು.ಶುದ್ಧ ಕುಡಿಯುವ ನೀರು ಸಿಗಲಿ: ಜಿಲ್ಲೆಯ ಹಳ್ಳಿ, ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯಬೇಕು. 699 ಶುದ್ಧ ಕುಡಿಯುವ ನೀರು ಘಟಕಗಳಲ್ಲಿ 67 ಘಟಕಗಳಲ್ಲಿ ಸಮಸ್ಯೆ ಇದೆ ಎಂದು ಸಭೆಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಶಾಸಕ ನೇಮರಾಜ್ ನಾಯ್ಕ ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ದೀಪಾ ಅವರನ್ನು ಪ್ರಶ್ನಿಸಿದರು.
ಸಂಸದ ತುಕಾರಾಂ ಮಾತನಾಡಿ, ಎಲ್ಲ ಕಾಯಿಲೆ ಮೂಲವೇ ಕುಡಿಯುವ ನೀರಾಗಿದೆ. ಹಾಗಾಗಿ ಶುದ್ಧ ನೀರು ಒದಗಿಸಬೇಕು. ಮೊದಲು ಹಳ್ಳಿಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದು, ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಬೇಕು. ತಾಳೆ ಬಸಾಪುರ ತಾಂಡಾ ಸೇರಿದಂತೆ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ. ಅಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.₹40 ಕೋಟಿ ಕೂಲಿ ಹಣ ಬಾಕಿ!: ಮನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡಿದವರಿಗೆ ₹40 ಕೋಟಿ ಕೂಲಿ ಹಣ ಬಾಕಿ ಇದೆ ಎಂದು ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಸಭೆಗೆ ತಿಳಿಸುತ್ತಿದ್ದಂತೆಯೇ ಶಾಸಕರಾದ ನೇಮರಾಜ್ ನಾಯ್ಕ ಮತ್ತು ಕೃಷ್ಣ ನಾಯ್ಕ ಅವರು ಮೊದಲು ಜನರಿಗೆ ಕೂಲಿ ಹಣ ಪಾವತಿ ಮಾಡಿ ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಆಶ್ರಯ ಯೋಜನೆಗಳ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಆಯಾ ತಾಪಂ ಇಒಗಳು ಪ್ರಗತಿ ನೋಟ ನೀಡಬೇಕು ಎಂದು ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ಪಶು ಇಲಾಖೆ, ಶಿಕ್ಷಣ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾ ನೋಡಲ್ ಅಧಿಕಾರಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಂ ಶಾ, ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಕುರಿ ಶಿವಮೂರ್ತಿ ಮತ್ತಿತರರಿದ್ದರು.